ನವದೆಹಲಿ: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಲೋಕಸಭೆಯಲ್ಲಿ ಹಣಕಾಸು ವಿಧೇಯಕದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿ, ಹಣಕಾಸು ಶಿಸ್ತು, ತೆರಿಗೆ ಸುಧಾರಣೆ, ರಾಷ್ಟ್ರೀಯ ಭದ್ರತೆ, ಸಹಕಾರಿ ಒಕ್ಕೂಟ ತತ್ವ ಹಾಗೂ ಮಾಜಿ ಸೈನಿಕರ ಕಲ್ಯಾಣ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಸದನದ ಗಮನಸೆಳೆದರು.ಜಿಎಸ್ಟಿ ಸುಧಾರಣೆಗಳು ದೇಶದ ಆರ್ಥಿಕತೆಯನ್ನು
ಬಲಪಡಿಸಿರುವುದಲ್ಲದೆ, ದೈನಂದಿನ ಬಳಕೆಯ ವಸ್ತುಗಳ ಮೇಲಿನ ತೆರಿಗೆ ಕಡಿಮೆ ಮಾಡುವ ಮೂಲಕ ಸಾಮಾನ್ಯ ಕುಟುಂಬಗಳಿಗೆ ನೆರವಾಗಿದೆ ಎಂದ ಅವರು ಸರಳೀಕೃತ ಆದಾಯ ತೆರಿಗೆ ಚೌಕಟ್ಟನ್ನು ಸ್ವಾಗತಿಸಿದರು.
ದ.ಕ. ಜಿಲ್ಲೆಯ ಉಳ್ಳಾಲ ಮತ್ತು ಸೋಮೇಶ್ವರ ಭಾಗದಲ್ಲಿ ತೀವ್ರವಾಗಿರುವ ಕಡಲ್ಕೊರೆತದ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಪರಿಸರ ಸಚಿವಾಲಯ ಹಾಗೂ ಭೂವಿಜ್ಞಾನ ಸಚಿವಾಲಯದ ಸಮನ್ವಯದೊಂದಿಗೆ ವೈಜ್ಞಾನಿಕ ಸಮಗ್ರ ಕರಾವಳಿ ರಕ್ಷಣಾ ಯೋಜನೆ ರೂಪಿಸಿ, ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ದಕ್ಷಿಣ ಕನ್ನಡದ ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದು, 50ನೇ ವರ್ಷದ ಸಂಭ್ರಮದಲ್ಲಿರುವ ನವ ಮಂಗಳೂರು ಬಂದರಿನ ಪೂರ್ಣ ಸಾಮರ್ಥ್ಯದ ಬಳಕೆಗೆ ರಸ್ತೆ ಸಂಪರ್ಕ ಸುಧಾರಿಸುವುದು ಅನಿವಾರ್ಯವಾಗಿದೆ ಎಂದು ಪ್ರತಿಪಾದಿಸಿದರು. ಈ ನಿಟ್ಟಿನಲ್ಲಿ ಮಂಗಳೂರು-ಬೆಂಗಳೂರು ಎಕ್ಸ್ಪ್ರೆಸ್ವೇ ಕಾರಿಡಾರ್ ಹಾಗೂ ಮಂಗಳೂರು ಬೈಪಾಸ್ ಕಾಮಗಾರಿಗಳಿಗೆ ವೇಗ ನೀಡುವಂತೆ ವಿನಂತಿಸಿದ ಅವರು,ಹಾಸನ-ಮಂಗಳೂರು ರೈಲು ಮಾರ್ಗದ ಶಿರಾಡಿ ಘಾಟ್ ವಿಭಾಗದ ಡಿಪಿಆರ್ ಸಿದ್ಧಪಡಿಸಲು ಅನುಮೋದನೆ ನೀಡಿದ ರೈಲ್ವೆ ಸಚಿವರಿಗೆ ಈ ವೇಳೆ ಧನ್ಯವಾದ ಸಲ್ಲಿಸಿದ್ದಾರೆ. ಜತೆಗೆ ಈ ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸಬೇಕು ಎಂದು ಒತ್ತಾಯಿಸಿದರು. ಇದರೊಂದಿಗೆ, ಕೇಂದ್ರ ಸರ್ಕಾರ ಘೋಷಿಸಿರುವ ‘ಸಿಟಿ ಎಕನಾಮಿಕ್ ರೀಜನ್’ ಯೋಜನೆಗೆ ಮಂಗಳೂರು ಅತ್ಯಂತ ಸೂಕ್ತ ನಗರವಾಗಿದ್ದು, ಇದನ್ನು ಆದ್ಯತೆಯ ಮೇಲೆ ಪರಿಗಣಿಸುವಂತೆ ಹಣಕಾಸು ಸಚಿವರಿಗೆ ಮನವಿ ಮಾಡಿದ್ದಾರೆ.














