ಮಂಗಳೂರು: ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕರಾವಳಿ ಭದ್ರತಾ ಪಡೆಯ ಸೈನಿಕರೊಂದಿಗೆ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಿಕೊಂಡಿದ್ದಾರೆ.ಕ್ಯಾ. ಚೌಟ ಅವರು ಶುಕ್ರವಾರ ತಮ್ಮ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ದೀಪಾವಳಿ ಆಚರಿಸಿಕೊಂಡಿದ್ದು, ಸಂಜೆ ಪಣಂಬೂರಿನಲ್ಲಿರುವ ಕರಾವಳಿ ಭದ್ರತಾ ಪಡೆಯ ಮಂಗಳೂರು ಘಟಕಕ್ಕೆ
ಭೇಟಿ ನೀಡಿದ್ದರು. ಅಲ್ಲಿ ಅವರು ಯೋಧರೊಂದಿಗೆ ಸಿಹಿ ಹಂಚಿಕೊಂಡು, ಜವಾನರೊಂದಿಗೆ ಉಭಯ ಕುಶಲೋಪರಿ ನಡೆಸುವ ಮೂಲಕ ದೀಪಾವಳಿಯನ್ನು ಆಚರಿಸಿಕೊಂಡರು.ಆ ಬಳಿಕ ಮಾತನಾಡಿದ ಸಂಸದರು “ತಮ್ಮ ಜೀವದ ಹಂಗನ್ನು ತೊರೆದು ದಿನದ 24 ಗಂಟೆಯೂ ತಾಯಿ ಭಾರತಾಂಬೆಯ ರಕ್ಷಣೆಯಲ್ಲಿ ತೊಡಗಿರುವ ಯೋಧರೊಂದಿಗೆ ಕಾಲ ಕಳೆದಿರುವುದು, ನನ್ನ ಸೇನಾ ದಿನಗಳನ್ನು ನೆನಪಿಸಿದ್ದು ಮಾತ್ರವಲ್ಲದೆ ನನ್ನ ಪಾಲಿಗೆ ಭಾವನಾತ್ಮಕವಾಗಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2014ರಲ್ಲಿ ದೇಶದ ಪ್ರಧಾನಿಯಾದ ಬಳಿಕ
ಪ್ರತಿ ವರ್ಷವೂ ದೀಪಾವಳಿಯನ್ನು ಗಡಿ ಕಾಯುವ ಯೋಧರೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ಲಕ್ಷಾಂತರ ನಮ್ಮ ಸೇನಾ ಕುಟುಂಬಕ್ಕೆ ಸ್ಪೂರ್ತಿ ತುಂಬುತ್ತಿದ್ದಾರೆ. ಹೀಗಾಗಿ ನಾನು ಕೂಡಾ ಸಂಸದನಾಗಿ ಮೊದಲ ದೀಪಾವಳಿಯನ್ನು ನಮ್ಮ ಕರಾವಳಿ ತೀರವನ್ನು ಹಗಲಿರುಳು ಕಾಯುತ್ತಿರುವ ನನ್ನ ಯೋಧ ಕುಟುಂಬದೊಂದಿಗೆ ಆಚರಿಸುವ ಅವಕಾಶ ಲಭಿಸಿರುವುದು ಅತ್ಯಂತ ಸ್ಮರಣೀಯವಾಗಿಸಿದೆ ಎಂದು ನುಡಿದರು. ಈ ವೇಳೆ ಕರಾವಳಿ ಭದ್ರತಾ ಪಡೆಯ ಅಧಿಕಾರಿಗಳು ಉಪಸ್ಥಿತರಿದ್ದರು.