ಸುಳ್ಯ: ಸುಳ್ಯ ಸಿಎ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳ ಭರ್ಜರಿ ಗೆಲುವಿನ ಹಿನ್ನಲೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ವಿಜಯೋತ್ಸವದಲ್ಲಿ ಮಾತನಾಡಿದ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ ಕಳೆದ 3 ದಶಕಗಳಿಂದ
ಆಡಳಿತ ನಡೆಸಿದ ಸಹಕಾರ ಭಾರತಿ ಬ್ಯಾಂಕ್ನ ಅಭಿವೃದ್ಧಿಗೆ ಮಾಡಿದ ಪ್ರಾಮಾಣಿಕ ಪ್ರಯತ್ನಕ್ಕೆ ಮತದಾರರು ನೀಡಿದ ಗೆಲುವು ಇದು.ಕಾರ್ಯಕರ್ತರ ಪ್ರಯತ್ನಕ್ಕೆ ಸಿಕ್ಕಿದ ಫಲ ಎಂದು ಹೇಳಿದರು. ಈ ಹಿಂದೆ ಸಿಎ ಬ್ಯಾಂಕ್ ಅಧ್ಯಕ್ಷ, ನಿರ್ದೇಶಕರಾದವರು ಬ್ಯಾಂಕಿನ ಬೆಳವಣಿಗೆಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಇದರಿಂದ ಮತದಾರರು ಮತ್ತೊಮ್ಮೆ ಭರ್ಜರಿ ಗೆಲುವಿನ ಮೂಲಕ ಅವಕಾಶ ನೀಡಿದ್ದಾರೆ ಎಂದು ಹೇಳಿದರು.
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ’ ಬಿಜೆಪಿ ಎಲ್ಲೆಡೆ ಗೆಲುವಿನ ನಗೆ ಬೀರಲು ಕೇಂದ್ರದ ನರೇಂದ್ರ ಮೋದಿ ಸರಕಾರದ ಸಾಧನೆ.ಕೃಷಿಕರಿಗೆ ನೀಡಿದ ಹಲವಾರು ನೀಡಿದ ಯೋಜನೆಗಳು ಕಾರಣ ಎಂದು ಹೇಳಿದರು. ಬ್ಯಾಂಕ್ನ ಅಭಿವೃದ್ಧಿಗೆ ಈ ಹಿಂದಿನ ಆಡಳಿತ ಮಂಡಳಿ ನಡೆಸಿದ ಪ್ರಾಮಾಣಿಕ ಪ್ರಯತ್ನದ ಫಲವಾಗಿ ಮತ್ತೆ ಗೆಲುವು ಸಾಧ್ಯವಾಗಿದೆ ಎಂದರು.
ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ ನಿರೂಪಿಸಿದರು.ಸಿಎ ಬ್ಯಾಂಕ್ ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿಗಳು, ಬಿಜೆಪಿ ಸಂಘ ಪರಿವಾರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.









