ಸುಳ್ಯ:ಡಿ.31ರಂದು ನಡೆಯುವ ಸುಳ್ಯ ಸಿಎ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ 9 ಮಂದಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದೆ. 4 ಸ್ಥಾನಗಳಿಗೆ ಅಭ್ಯರ್ಥಿಗಳು ಅಂತಿಮಗೊಂಡಿಲ್ಲ.ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ನೇತೃತ್ವದಲ್ಲಿ ನಡೆದ ಬಿಜೆಪಿ ಪ್ರಮುಖರ ಸಭೆಯಲ್ಲಿ 9 ಅಭ್ಯರ್ಥಿಗಳನ್ನು
ಅಂತಿಮಗೊಳಿಸಲಾಯಿತು. ಸಾಲಗಾರರ ಕ್ಷೇತ್ರದಲ್ಲಿ ಹಾಲಿ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ, ಹಾಲಿ ನಿರ್ದೇಶಕರಾದ ಹೇಮಂತ ಕಂದಡ್ಕ, ವಾಸುದೇವ ನಾಯಕ್ ಪುತ್ತಿಲ ಅವರು ಮತ್ತೆ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ. ಅಲ್ಲದೆ ಎನ್.ಎ.ರಾಮಚಂದ್ರ, ಶಿವರಾಮ ಕೇರ್ಪಳ, ವಿಕ್ರಂ ಅಡ್ಪಂಗಾಯ, ಪ್ರಬೋದ್ ಶೆಟ್ಟಿ ಮೇನಾಲ, ಕೇಶವ ಮಾಸ್ತರ್ ಹೊಸಗದ್ದೆ, ಚಂದ್ರಶೇಖರ ಡಿ.ಕೆ. ಅವರು ಸ್ಪರ್ಧಿಸಲಿದ್ದಾರೆ.
ಎರಡು ಮಹಿಳಾ ಸ್ಥಾನಗಳಿಗೆ, ಒಂದು ಸಾಮಾನ್ಯ ಕ್ಷೇತ್ರ, ಮತ್ತು ಒಂದು ಸಾಲಗಾರರಲ್ಲದ ಕ್ಷೇತ್ರಕ್ಕೆ ಅಭ್ಯರ್ಥಿ ಅಂತಿಮಗೊಂಡಿಲ್ಲ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.
ಡಿ.21ರಂದು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ. ಪ್ರತಿಷ್ಠಿತ ಸಿಎ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧಿಸಲು ಹಲವು ಮಂದಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಆಕಾಂಕ್ಷಿಗಳಾಗಿ ಇದ್ದರು. ಬಿಜೆಪಿ ಮುಖಂಡರು ಹಲವು ಹಂತದಲ್ಲಿ ಚರ್ಚೆ ನಡೆಸಿ ಅಳೆದು ತೂಗಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದಾರೆ.















