ಕಾಸರಗೋಡು:ಕರ್ನಾಟಕ ಮೂಲದ ಶಬರಿಮಲೆ ಯಾತ್ರಾರ್ಥಿಗಳು ಪ್ರಯಾಣಿಸುತ್ತಿದ್ದ ಬಸ್ಸು ಕಂದಕಕ್ಕೆ ಉರುಳಿ ಬಿದ್ದು ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟು ಹಲವು ಮಂದಿ ಗಾಯಗೊಂಡ ಘಟನೆ ಕಾಸರಗೋಡು ಜಿಲ್ಲೆಯ ಚಿತ್ತಾರಿಕ್ಕಾಲ್ ಸಮೀಪ ಕಾಟ್ಟಾಂಕವಲ ಎಂಬಲ್ಲಿ ಶನಿವಾರ ಮಧ್ಯಾಹ್ನದ ಬಳಿಕ ನಡೆದಿದೆ. ಮೈಸೂರಿನಿಂದ
ಶಬರಿಮಲೆಗೆ ಯಾತ್ರೆ ತೆರಳಿ ಹಿಂತಿರುಗುತ್ತಿದ್ದ ಅಯ್ಯಪ್ಪ ಭಕ್ತರು ಪ್ರಯಾಣಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ ಎಂದು ತಿಳಿದು ಬಂದಿದೆ. ಬಸ್ಸು ರಸ್ತೆಯಿಂದ ಸುಮಾರು 30 ಅಡಿಯಷ್ಟು ಆಳಕ್ಕೆ ಉರುಳಿ ಬಿದ್ದಿದೆ. ಬಸ್ನಲ್ಲಿ 45ಕ್ಕೂ ಹೆಚ್ಚು ಮಂದಿ ಇದ್ದರು ಎನ್ನಲಾಗಿದೆ. ಗಾಯಾಳುಗಳನ್ನು ನಾಗರಿಕರು ಹಾಗೂ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. 5 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪರಿಯಾರಂ, ಚೆರುಪುಯ, ಮತ್ತಿತರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.













