ಸುಳ್ಯ:ಜಾಲ್ಸೂರು ಗ್ರಾಮದ ಮೋಂಟಡ್ಕದಲ್ಲಿ ಕೆರೆಗೆ ಬಿದ್ದ ಕಾಡು ಕೋಣನ್ನು ಅರಣ್ಯ ಇಲಾಖೆ ಮತ್ತು ಸ್ಥಳೀಯರು ಸೇರಿ ರಕ್ಷಣೆ ಮಾಡಿ ಕಾಡಿಗೆ ಬಿಡಲಾಯಿತು. ಕಾಡಿನಿಂದ ನಾಡಿಗೆ ಇಳಿದ ಕಾಡು ಕೋಣವೊಂದು ಕೆರೆಗೆ ಬಿದ್ದ ಪ್ರಸಂಗ ಇಂದು ಬೆಳಿಗ್ಗೆ ವರದಿಯಾಗಿತ್ತು. ಮೋಂಟಡ್ಕದಲ್ಲಿ ತೋಟದ ಕೆರೆಯಲ್ಲಿ ಕಾಡು ಕೋಣ ಬಿದ್ದಿರುವುದು


ಕಂಡು ಬಂದ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಲಾಗಿದೆ.ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪರಿಶೀಲನೆ ನಡೆಸಿ ಕಾಡು ಕೋಣ ರಕ್ಷಣೆಗೆ ಕಾರ್ಯಾಚರಣೆ ಆರಂಭಿಸಿದರು. ಜೆಸಿಬಿ ತಂದು ಕೆರೆಯ ಒಂದು ಭಾಗದಲ್ಲಿ ತಗ್ಗು ಮಾಡಿ ದಾರಿ ಮಾಡಿ ಕೊಟ್ಟರೂ ಕಾಡು ಕೋಣನಿಗೆ ಕೆರೆಯ ನೀರಿನಿಂದ ಮೇಲೆ ಬರಲು ಸಾಧ್ಯವಾಗಲಿಲ್ಲ. ಬಳಿಕ ಕೋಣನ ಕುತ್ತಿಗೆಗೆ ಹಗ್ಗ ಹಾಕಿ ಜೆಸಿಬಿಯಿಂದ ಮೆಲ್ಲನೆ ಮೇಲಕ್ಕೆ ಎಳೆದಾಗ ಕಾಡುಕೋಣ ಸಿದ್ಧಪಡಿಸಿದ
ರಸ್ತೆಯ ಮೂಲಕ ಮೇಲಕ್ಕೆ ಹತ್ತಿ ಬಂದಿತು. ಬಳಿಕ ಕುತ್ತಿಗೆಯ ಹಗ್ಗ ತೆಗೆದಾಗ ಬದುಕಿದೆ ಬಡಜೀವ ಎಂದು ಕಾಡು ಕೋಣ ಕಾಡಿಗೆ ಓಡಿತು. ಅರಣ್ಯ ಇಲಾಖೆಯವರು ಮತ್ತು ಸ್ಥಳೀಯರು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಕೋಣನನ್ನು ರಕ್ಷಿಸಿ ಮರಳಿ ಕಾಡಿಗೆ ಬಿಡಲಾಯಿತು.ಈ ಭಾಗದಲ್ಲಿ ಕಾಡುಕೋಣಗಳು ಸಾಮಾನ್ಯವಾಗಿ ಕಂಡು ಬರುತ್ತದೆ. ಬೊಳುಬೈಲು, ಮೋಂಟಡ್ಕ, ಕಾಟೂರು, ಕುಕ್ಕಂದೂರು ಭಾಗದಲ್ಲಿ ಕಾಡು ಕೋಣಗಳ ಹಿಂಡು ನಾಡಿಗೆ ಇಳಿಯುವುದು, ತೋಟಕ್ಕೆ ನುಗ್ಗಿ ಕೃಷಿ ಹಾನಿ ಮಾಡುವುದು ಸಾಮಾನ್ಯವಾಗಿದೆ. ಕೆಲವೊಮ್ಮೆ ಕಾಡುಕೋಣ ಆಯ ತಪ್ಪಿ ಕೆರೆಗೆ ಬಿದ್ದು ಫಜೀತಿ ಪಡುವುದೂ ಇದೆ.
