ದಾವಣಗೆರೆ: ಜುಲೈ 3ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಜುಲೈ 7ರಂದು ಬಜೆಟ್ ಮಂಡಿಸಲಾಗುವುದು ಎಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಬಜೆಟ್ ತಯಾರಿಕಾ ಪೂರ್ವಭಾವಿ ಸಭೆಯನ್ನೇ ಇನ್ನೂ
ನಡೆಸಿಲ್ಲ. ಜುಲೈ 3ರಂದು ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು. ಆ ಬಳಿಕ ರಾಜ್ಯಪಾಲರ ಭಾಷಣದ ಬಗ್ಗೆ ಚರ್ಚೆ ನಡೆದ ನಂತರ 7ರಂದು ಬಜೆಟ್ ಮಂಡಿಸಲಾಗುವುದು. ಬಜೆಟ್ ಗಾತ್ರದ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ ಎಂದರು.
ವಿದ್ಯುತ್ ದರ ಹೆಚ್ಚಳ ನಾವು ಮಾಡಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಮಂಡಳಿ ಪ್ರಸ್ತಾವ ಸಲ್ಲಿಸಿತ್ತು . ಈಗ ನಾವು ಅದನ್ನು ಜಾರಿಗೊಳಿಸಿದ್ದೇವೆ ಅಷ್ಟೇ ಎಂದು ವಿದ್ಯುತ್ ದರ ಹೆಚ್ಚಳ ಮಾಡಿದ ವಿಚಾರದ ಬಗ್ಗೆ ಸಮರ್ಥಿಸಿಕೊಂಡರು.
ಕೃಷಿ ಚಟುವಟಿಕೆಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ, ಕೀಟ ನಾಶಕಗಳನ್ನು ಪೂರೈಸುವಂತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಪಂ ಸಿಇಒಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು. ಹಾಗೊಂದು ವೇಳೆ ಪ್ರವಾಹ ಬಂದರೆ ಎದುರಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುವಂತೆ ಆಯಾ ಜಿಲ್ಲೆಯ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.