ಸುಳ್ಯ: ಬಜೆಟ್ ಮಂಡನೆ ವೇಳೆ ಮಿಗತೆ ಬಜೆಟ್ ಮಂಡನೆ ಬೇಡ. ಹಣವನ್ನು ಉಳಿಸುವ ಬದಲು ಇರಿಸಿದ ಹಣವನ್ನು ಪೂರಕ ಕೆಲಸಗಳಿಗೆ ಖರ್ಚು ಮಾಡಿ. ನಗರದಲ್ಲಿರುವ ರಸ್ತೆಗಳ ಹೊಂಡ-ಗುಂಡಿಗಳನ್ನು ಮುಚ್ಚಲು ಅನುದಾನ ಬಳಕೆ ಮಾಡುವಂತೆ ಸುಳ್ಯ ನಗರ ಪಂಚಾಯತ್ನ ಸಭಾಂಗಣದಲ್ಲಿ ಶನಿವಾರ ನ.ಪಂ. ಆಡಳಿತಾಧಿಕಾರಿ ಜಿ.ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ತಯಾರಿ ಪೂರ್ವಭಾವಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ನಗರ ಪಂಚಾಯತ್ಗೆ ಮಿಗತೆ ಬಜೆಟ್
ಅವಶ್ಯಕತೆಯಿಲ್ಲ. ಅದರ ಬದಲು ಉಳಿಕೆ ಹಣವನ್ನು ರಸ್ತೆ ಹೊಂಡ-ಗುಂಡಿ ಮುಚ್ಚಲು ಮತ್ತಿತರ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಿ ಎಂದು ಸಾರ್ವಜನಿಕರು ಸಲಹೆ ನೀಡಿದರು. ಖರ್ಚಾಗದೇ ಇಳಿಕೆ ಆಗಿರುವ ಅನುದಾನವನ್ನು ವಾರ್ಡ್ಗಳಿಗೆ ಹಂಚಿ, ಅಗತ್ಯ ಕೆಲಸ ಮಾಡಿಸಬಹುದು ಎಂಬ ಸಲಹೆ ಕೇಳಿಬಂತು. ಜಟ್ಟಿಪಳ್ಳ ರಸ್ತೆಯನ್ನು ಶೀಘ್ರ ದುರಸ್ತಿಗೆ ಸಭೆಯಲ್ಲಿ ಆಗ್ರಹಿಸಲಾಯಿತು. ಸುಳ್ಯ ಜಾತ್ರೆಯ ದೇವರ ಸವಾರಿ ಮೊದಲು ರಸ್ತೆಯನ್ನು ತಾತ್ಕಲಿಕ ರೀತಿಯಲ್ಲಿ ದುರಸ್ತಿ ಮಾಡಲಾಗುವುದು ಎಂದು ಮುಖ್ಯಾಧಿಕಾರಿ ಸುಧಾಕರ್ ತಿಳಿಸಿದರು.
ನಗರ ಪಂಚಾಯತ್ನ ಪುರಭವನ ನಿರ್ವಹಣೆ ಸಮರ್ಪಕವಾಗಿಲ್ಲ. ಮದುವೆ ಕಾರ್ಯಕ್ರಮದ ತಂಡವೇ ಹಾಲ್ ಸ್ವಚ್ಚತೆ ಮಾಡಬೇಕಾಗುತ್ತಿದೆ. ಈ ರೀತಿ ಅವ್ಯವಸ್ಥೆಯಿಂದ ಇದ್ದಲ್ಲಿ ನ.ಪಂ.ಗೆ ಹೇಗೆ ಆದಾಯ ಬರಲು ಸಾಧ್ಯ ಎಂದು ಸದಸ್ಯ ವೆಂಕಪ್ಪ ಗೌಡ ಪ್ರಶ್ನಿಸಿದರು. ಮುಂದೆ ಪುರಭವನ ನಿರ್ವಹಣೆ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ನೀರು ಸರಬರಾಜು ಶುಲ್ಕ ತೆರಿಗೆ ಹೆಚ್ಚಿಸುವ ಮೊದಲು, ಬಾಕಿ ಇರಿಸಿಕೊಂಡ ಬಿಲ್ ವಸೂಲಿಗೆ ಕ್ರಮಕೈಗೊಳ್ಳುವಂತೆ ವೆಂಕಪ್ಪ ಗೌಡ ಒತ್ತಾಯಿಸಿದರು. ತೆರಿಗೆ ಕಟ್ಟುವವರು ಮಾತ್ರ ತೆರಿಗೆ ಕಟ್ಟುವುದಾ, ಬಾಕಿ ಉಳಿಸಿಕೊಂಡವರನ್ನು ತೆರಿಗೆ ಕಟ್ಟಿಸಲು ಕ್ರಮ ಯಾಕಿಲ್ಲ. ಎಂದು ಅವರು ಪ್ರಸ್ತಾಪಿಸಿದರು. ನೀರಿನ ದರ ಹೆಚ್ಚಿಸುವ ಪ್ರಸ್ತಾಪ ಇಲ್ಲಾ ಎಂದು ಮುಖ್ಯಾಧಿಕಾರಿ ತಿಳಿಸಿದರು. ನ.ಪಂ.ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ವ್ಯಕ್ತವಾಯಿತು. ಕೆಲ ಸಿಬ್ಬಂದಿಗಳು ಸಾರ್ವಜನಿಕರಿಗೆ ಸರಿಯಾಗಿ ನಿರ್ದೇಶನ ನೀಡುತ್ತಿಲ್ಲ ಎಂದು ದೂರಲಾಯಿತು. ಸಿಬ್ಬಂದಿಗಳು ಸರಿಯಾಗಿ ಕೆಲಸ ನಿರ್ವಹಿಸಿದರೆ ನ.ಪಂ. ಕೆಲಸಗಳು ಸಮರ್ಪಕವಾಗಲಿದೆ. ಆದರೆ ಇಲ್ಲಿನ ಕೆಲ ಸಿಬ್ಬಂದಿಗಳ ವರ್ತನೆಯಿಂದ ಸಾರ್ವಜನಿಕರು ಕಛೇರಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸಭೆಯಲ್ಲಿ ಪ್ರಸ್ತಾಪವಾಯಿತು. ಈ ಬಗೆ ಮುಖ್ಯಾಧಿಕಾರಿ ಹಾಗೂ ಆಡಳಿತಾಧಿಕಾರಿ ಅವರು ಸಿಬ್ಬಂದಿಗಳಿಗೆ ಸೂಕ್ತ ರೀತಿಯಲ್ಲಿ ಕೆಲಸ ನಿರ್ವಹಿಸಲು ಸೂಚನೆ ನೀಡಬೇಕು ಎಂದು ತಿಳಿಸಲಾಯಿತು.
ಸಭೆಯಲ್ಲಿ ಇಂಜಿನಿಯರ್ ಅವರು ಇಲ್ಲದ ಬಗ್ಗೆ ಪ್ರಸ್ತಾಪವಾಗಿ ಅವರನ್ನು ಸಭೆಗೆ ಕರೆಸುವಂತೆ ವೆಂಕಪ್ಪ ಗೌಡ ಹೇಳಿದರು. ಬಳಿಕ ಇಂಜಿನಿಯರ್ ಸಭೆಗೆ ಆಗಮಿಸಿ ಮಾಹಿತಿ ನೀಡಿದರು. ಸಭೆಯಲ್ಲಿ ಕೆಲ ಸಿಬ್ಬಂದಿಗಳ ಬಗ್ಗೆ ಅಧಿಕಾರಿ ಗರಂ ಆದ ಘಟನೆಯೂ ನಡೆಯಿತು. ಕೆಲ ದಿನಗಳ ಹಿಂದೆ ನಗರದ ಪಾರ್ಕಿಂಗ್ ವಿಚಾರದ ಬಗ್ಗೆ ಪೊಲೀಸರು ತಿಳಿಸಿದಂತೆ ಜನವರಿ ಬಳಿಕವೂ ಯಾವುದೇ ಅನುಷ್ಠಾನ ಕೆಲಸ ನಡೆದಿಲ್ಲ ಎಂದು ಸಾರ್ವಜನಿಕರು ತಿಳಿಸಿದರು. ಮುಂದೆ ಜಾತ್ರೆಯ ಮೊದಲು ಪಾರ್ಕಿಂಗ್ ವಿಚಾರದ ಬಗ್ಗೆ ಸಭೆ ಕರೆಯಲು ನಿರ್ಧರಿಸಲಾಯಿತು. ಸಭೆಗೆ ವೃತ್ತ ನಿರೀಕ್ಷಕರು, ಎಸೈ ಅವರು ಕಡ್ಡಾಯವಾಗಿ ಆಗಮಿಸಬೇಕು ಎಂದು ಒತ್ತಾಯಿಸಲಾಯಿತು.
ನಗರದಲ್ಲಿ ಅಳವಡಿಸಲಾದ ಬ್ಯಾನರ್ ಹರಿದ ಕಿಡಿಗೇಡಿಗಳ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮಕೈಗೊಳ್ಳುವಂತೆ ಸಭೆಯಲ್ಲಿ ಸದಸ್ಯರಾದ ಕೆ.ಎಸ್.ಉಮ್ಮರ್ ಮತ್ತಿತರರು ಒತ್ತಾಯಿಸಿದರು. ಈ ಬಗ್ಗೆ ನಿರ್ಣಯ ಕೈಗೊಂಡು ಪೊಲೀಸ್ ಇಲಾಖೆಗೆ ಕಳುಹಿಸಲು ಸಲಹೆ ನೀಡಲಾಯಿತು. ಕೆಇಬಿ ಅವರು ವಿದ್ಯುತ್ ಕಂಬ ಹಾಕುವಾಗ ನ.ಪಂ. ಅನುಮತಿ ಪಡೆಯಲಿ ಎಂದು ಸದಸ್ಯರು ತಿಳಿಸಿದರು. ಅಕ್ರಮ ಕಟ್ಟಡ ನಿರ್ಮಾಣಕ್ಕೆ ತಡೆ ನೀಡಬೇಕು ಎಂಬ ಬಗ್ಗೆಯೂ ಚರ್ಚೆ ನಡೆಯಿತು.
ಸಭೆಯಲ್ಲಿ ನಗರ ಪಂಚಾಯತ್ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವನಿಕರು ಭಾಗವಹಿಸಿದ್ದರು.ನಗರ ಪಂಚಾಯತ್ ಆಡಳಿತಾಧಿಕಾರಿ ಜಿ.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.ಮುಖ್ಯಾಧಿಕಾರಿ ಸುಧಾಕರ ಎಂ.ಎಚ್.ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸದಸ್ಯರಾದ ವಿನಯಕುಮಾರ್ ಕಂದಡ್ಕ, ಕೆ.ಎಸ್.ಉಮ್ಮರ್, ಬಾಲಕೃಷ್ಣ ಭಟ್, ಎಂ.ವೆಂಕಪ್ಪ ಗೌಡ, ಬಾಲಕೃಷ್ಣ ರೈ, ಶರೀಫ್ ಕಂಠಿ, ಡೇವಿಡ್ ಧೀರಾ ಕ್ರಾಸ್ತಾ, ಕಿಶೋರಿ ಶೇಟ್, ಶೀಲಾ ಅರುಣ ಕುರುಂಜಿ, ಶಶಿಕಲಾ ನೀರಬಿದಿರೆ, ನಾರಾಯಣ ಶಾಂತಿನಗರ, ಪ್ರಮುಖರಾದ ಸಿಎ ಗಣೇಶ್ ಭಟ್ ಪಿ, ಡಿ.ಎಸ್.ಗಿರೀಶ್, ರಾಮಚಂದ್ರ ಪೆಲ್ತಡ್ಕ, ಶಾರೀಖ್ ಡಿ.ಎಂ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು.









