ನವದೆಹಲಿ: ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಕೇಂದ್ರ ಸರ್ಕಾರದ 2026-27ನೇ ಸಾಲಿನ ಬಜೆಟ್, ಭಾರತದ ಅಭಿವೃದ್ಧಿ ಪಥದಲ್ಲಿ ನಿರ್ಣಾಯಕ ಮೈಲಿಗಲ್ಲು ಆಗಿದ್ದು, ಇದು ಜನರ ನಿರೀಕ್ಷೆ ಹಾಗೂ ಸಾಮೂಹಿಕ ಸಹಭಾಗಿತ್ವದೊಂದಿಗೆ ಸಿದ್ಧಗೊಂಡ ‘ಯುವ ಶಕ್ತಿ’ ಆಧಾರಿತ ದೂರದೃಷ್ಟಿಯ ಬಜೆಟ್ ಎಂಬುದಾಗಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಬಣ್ಣಿಸಿದ್ದಾರೆ. ಕೇಂದ್ರ ಬಜೆಟ್ ಕುರಿತು
ಪ್ರತಿಕ್ರಿಯಿಸಿರುವ ಸಂಸದರು, ಇಂದು ಮಂಡಿಸಿದ ಬಜೆಟ್ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ಬಡವರು, ಶೋಷಿತ ವರ್ಗ ಕಲ್ಯಾಣದತ್ತ ಹೊಂದಿರುವ ಸಂಕಲ್ಪಕ್ಕೆ ಸಾಕ್ಷಿಯಾಗಿದ್ದು, ಅದು ಮೂರು ಪ್ರಮುಖ ‘ಕರ್ತವ್ಯ’ಗಳ ರೂಪದಲ್ಲಿ ಕಾರ್ಯಗತಗೊಂಡಿದೆ. ಕಳೆದ 11 ವರ್ಷಗಳ ಅಭಿವೃದ್ಧಿಯ ಅಡಿಪಾಯದ ಮೇಲೆ ಈಗ ಯುವಶಕ್ತಿ, ನಾರಿಶಕ್ತಿ, ಎಂ.ಎಸ್.ಎಂ.ಇ ಮತ್ತು ನವೋದ್ಯಮಿಗಳೆಂಬ ಸದೃಢ ಸ್ತಂಭಗಳನ್ನು ನಿರ್ಮಿಸಿ, ದೇಶದ ಪ್ರಗತಿಗೆ ಹೊಸ ವೇಗ ನೀಡುವ ಬಜೆಟ್ ಇದಾಗಿದೆ ಎಂದು ಶ್ಲಾಘಿಸಿದ್ದಾರೆ.
ಈ ಬಜೆಟ್ ಮೂರು ಪ್ರಮುಖ ಕರ್ತವ್ಯಗಳ ಆಧಾರದ ಮೇಲೆ ಅಭಿವೃದ್ಧಿ ಪೂರಕ ಆಡಳಿತದತ್ತ ಸ್ಪಷ್ಟ ದಿಕ್ಸೂಚಿಯನ್ನು ನೀಡಿದೆ. ಮೊದಲನೆಯದಾಗಿ, ಜಾಗತಿಕ ಆರ್ಥಿಕ ಏರಿಳಿತಗಳ ನಡುವೆಯೂ ಭಾರತದ ಆರ್ಥಿಕ ಪ್ರಗತಿಗೆ ವೇಗ ನೀಡುವುದು ಮತ್ತು ಆರ್ಥಿಕತೆ ಚೇತರಿಸಿಕೊಳ್ಳುವ ಶಕ್ತಿಯನ್ನು ವೃದ್ಧಿಸುವುದು; ಎರಡನೆಯದಾಗಿ, ಯುವಜನತೆಯ ಆಕಾಂಕ್ಷೆಗಳನ್ನು ಈಡೇರಿಸುತ್ತಾ ಅವರಲ್ಲಿ ಹೊಸ ಸಾಮರ್ಥ್ಯ ಬೆಳೆಸುವುದು ಹಾಗೂ ಮೂರನೆಯದಾಗಿ, ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಮಂತ್ರದೊಂದಿಗೆ ಪ್ರತಿಯೊಂದು ಕುಟುಂಬ, ಸಮುದಾಯ ಮತ್ತು ಪ್ರದೇಶಗಳಿಗೆ ಅಗತ್ಯ ಸಂಪನ್ಮೂಲ ಹಾಗೂ ಸಮಾನ ಅವಕಾಶಗಳನ್ನು ಒದಗಿಸಿ, ಎಲ್ಲರೂ ದೇಶದ ಪ್ರಗತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು ಈ ಬಜೆಟ್ನ ಆಶಯವಾಗಿದೆ ಎಂದು ಕ್ಯಾ. ಚೌಟ ಅಭಿಪ್ರಾಯಪಟ್ಟಿದ್ದಾರೆ.





