ಸುಳ್ಯ:ನಿರಂತರ ಪ್ರಯತ್ನದಿಂದ ಯಾವುದೇ ವ್ಯಕ್ತಿಯು ತನ್ನ ಗುರಿಯನ್ನು ಸಾಧಿಸಬಹುದು. ಅದೇ ರೀತಿ ದೇಶಕ್ಕೂ ದೊಡ್ಡ ಗುರಿ ಇದೆ. 2047ರಲ್ಲಿ ಎಲ್ಲಾ ರೀತಿಯಲ್ಲಿ ಸಮಗ್ರ ಅಭಿವೃದ್ಧಿ ಹೊಂದಿ ಶ್ರೇಷ್ಠ ಭಾರತವಾಗಿ ಬೆಳಗಬೇಕು ಎಂಬುದು ಆ ಗುರಿ ಎಂದು ಬಂದರು, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಹೇಳಿದ್ದಾರೆ. ಕೇಂದ್ರ ಸಂವಹನ ಇಲಾಖೆ ಮಂಗಳೂರು, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ, ಐಟಿಡಿಟಿ ದಕ್ಷಿಣ ಕನ್ನಡ ಜಿಲ್ಲೆಯ ಸಂಯುಕ್ತ ಆಶ್ರಯದಲ್ಲಿ ಸರಕಾರಿ
ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಬುಡ ಕಟ್ಟು ಗೌರವ ದಿನ, ಸ್ವಾತಂತ್ರ್ಯದ ಅಮೃತ ಮಹೋತ್ಸವ, ಪ್ರಧಾನ ಮಂತ್ರಿ ವಿಷನ್ ಫಾರ್ ಇಂಡಿಯಾ-2047, ಏಕ ಭಾರತ ಶ್ರೇಷ್ಠ ಭಾರತ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಎಂಟೂವರೆ ವರ್ಷದಲ್ಲಿ ನರೇಂದ್ರ ಮೋದಿ ಸರಕಾರ ಅದ್ಭುತ ಸಾಧನೆ ಮಾಡಿದೆ. ಎಲ್ಲಾ ವರ್ಗಗಳ ಜನರ ಸಮಗ್ರ ಅಭಿವೃದ್ಧಿಗೆ ಸರಕಾರ ಯೋಜನೆ ರೂಪಿಸಿದೆ. ವ್ಯಕ್ತಿಯ ಸಾಧನೆ ಮತ್ತು ಸಮಾಜಕ್ಕೆ ಕೊಟ್ಟಿರುವ ಕೊಡುಗೆಯಿಂದ ಆತ ಶ್ರೇಷ್ಠನಾಗುತ್ತಾನೆ ಎಂದು ಹೇಳಿದ ಸಚಿವರು ಸರಕಾರದ ಯೋಜನೆಗಳ ಮಾಹಿತಿಯನ್ನು ಜನರಿಗೆ ಸಮರ್ಪಕವಾಗಿ ತಿಳಿಸುವ ಕಾರ್ಯ ಆಗಬೇಕು ಎಂದು ಅವರು ಸೂಚನೆ ನೀಡಿದರು.

ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸತೀಶ್ ಕುಮಾರ್ ಕೆ.ಆರ್.ಅಧ್ಯಕ್ಷತೆ ವಹಿಸಿದ್ದರು.ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್ ಸಿ.ಆರ್ ಸಂಪನ್ಮೂಲ ವ್ಯಕ್ತಿಗಳಾದ್ದರು. ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ನಂದಕುಮಾರ್ ಮುಖ್ಯ ಅತಿಥಿಯಾಗಿದ್ದರು. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಸಂಚಾಲಕ ಪುಷ್ಪರಾಜ್ ಕೆ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕ ಧನರಾಜ್ ಸ್ವಾಗತಿಸಿದರು.ಕೇಂದ್ರ ಸಂವಹನ ಇಲಾಖೆಯ ಕ್ಷೇತ್ರ ಪ್ರಚಾರ ಅಧಿಕಾರಿ ಜಿ.ತುಕರಾಮ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು.