ಸುಳ್ಯ:ಜಗತ್ತು 5ಜಿ ವೇಗದ ನಾಗಾಲೋಟದಲ್ಲಿದ್ದರೆ ಸುಳ್ಯ ತಾಲೂಕು ಕೇಂದ್ರದ ಬಿಎಸ್ಎನ್ಎಲ್ ಮಾತ್ರ ಯಾವಾಗಲೂ ನಾಟ್ ರೀಚೇಬಲ್. ಇಲ್ಲಿನ ಮೊಬೈಲ್ ಗ್ರಾಹಕರು ನೆಟ್ವರ್ಕ್ ಸಮಸ್ಯೆಯಿಂದ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಸುಳ್ಯ ನಗರದ ಜಯನಗರ, ಹಳೇಗೇಟು ಭಾಗದಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆ ತೀವ್ರಗೊಂಡಿದೆ. ಕಳೆದ ಕೆಲವು ದಿನಗಳಿಂದ ಗ್ರಾಹಕರಿಗೆ ಸಮಸ್ಯೆ ತಲೆದೋರಿದ್ದರೂ ಇದೀಗ ಇನ್ನಷ್ಟು
ಬಿಗಡಾಯಿಸಿದೆ.ಗುರುವಾರ ಬೆಳಗ್ಗಿನಿಂದಲೇ ಜಯನಗರ, ಹಳೆಗೇಟು ಭಾಗದಲ್ಲಿ ನೆಟ್ವರ್ಕ್ ಇರಲಿಲ್ಲ. ನೆಟ್ವರ್ಕ್ ಕಡಿತವಾಗಿ ಕರೆ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣ ಆಗಿದೆ. ಕಳೆದ ಹಲವು ದಿನಗಳಿಂದ ಹಳೆಗೇಟು, ಜಯನಗರ ಭಾಗದಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆ ಇದೆ. ಪದೇ ಪದೇ ನೆಟ್ವರ್ಕ್ ಕಡಿತವಾಗುವುದು, ಕರೆ ಮಾಡಿ ಮಾತನಾಡುತ್ತಿದ್ದಂತೆ ಅರ್ಧಕ್ಕೆ ಕರೆ ಕಟ್ ಆಗುವುದು. ಒಂದು ವೇಳೆ ಕರೆ ಸಿಕ್ಕಿದರೂ ಮಾತನಾಡುವುದು ಸರಿಯಾಗಿ ಕೇಳಿಸದೇ ಇರುವ ಸಮಸ್ಯೆ, ನೆಟ್ವರ್ಕ್ ತೋರಿಸುತ್ತಿದ್ದರೂ ನಾಟ್ ರೀಚೇಬಲ್ ಆಗುವುದು, ಕರೆ ಬಂದರೂ ಸ್ವೀಕರಿಸಲು ಆಗದ ಸ್ಥಿತಿ ಹೀಗೆ ಹಲವು ಸಮಸ್ಯೆ ತಲೆದೋರುತಿದೆ ಎಂದು ಗ್ರಾಹಕರು ದೂರಿದ್ದಾರೆ. ಮೊಬೈಲ್ಗೆ ಬಿಎಸ್ಎನ್ಎಲ್ ಇಂಟರ್ನೆಟ್ ಉಪಯೋಗಿಸುವವರ ಪಾಡಂತೂ ಹೇಳ ತೀರದು.
ಕೆಲವೆಡೆ ವಿದ್ಯುತ್ ಕಡಿತ ಆದರೆ ಬ್ಯಾಟರಿ ವೀಕ್ ಆಗಿ ನೆಟ್ವರ್ಕ್ ಕಡಿತ ಆಗುವ ಸಮಸ್ಯೆ ಇದೆ. ಆದರೆ ಜಯನಗರ, ಹಳೆಗೇಟ್ ಭಾಗಕ್ಕೆ ನೆಟ್ವರ್ಕ್ ಒದಗಿಸುವ ಟವರ್ ಕರೆಂಟ್ ಇದ್ದರೂ ನೆಟ್ವರ್ಕ್ ಇರುವುದಿಲ್ಲ. ಪದೇ ಪದೇ ನೆಟ್ವರ್ಕ್ ಮಾಯವಾಗುತ್ತಾ ಇರುತ್ತದೆ.ನಗರ ಪ್ರದೇಶದಲ್ಲಿಯೇ ಬಿಎಸ್ಎನ್ಎಲ್ ಟವರ್ ಸಮಸ್ಯೆ ಹೀಗಾದರೆ ಸುಳ್ಯ ತಾಲೂಕಿನ ಗ್ರಾಮೀಣ ಭಾಗದ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ.ಹಲವು ಗ್ರಾಮಗಳಲ್ಲಿ ದಿನಗಟ್ಟಲೆ ನೆಟ್ವರ್ಕ್ ಇಲ್ಲದ ಸಮಸ್ಯೆ ಇದೆ. ಕೆಲವೆಡೆ ವಿದ್ಯುತ್ ಕಡಿತ ಆದ ಕೂಡಲೇ ನೆಟ್ವರ್ಕ್ ಕಡಿತಗೊಳ್ಳುತ್ತದೆ. ನಿರಂತರ ವಿದ್ಯುತ್ ಕಡಿತದ ಜೊತೆಗೆ ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬಿಎಸ್ಎನ್ಎಲ್ ಟವರನ್ನು ಮಾತ್ರ ನಂಬಿರುವ ಹಲವು ಗ್ರಾಮಗಳ ಜನರಿಗೆ ನೆಟ್ವರ್ಕ್ ಸಮಸ್ಯೆ ಮುಗಿಯದ ಅಧ್ಯಾಯವಾಗಿದೆ.
ಸುಳ್ಯ ತಾಲೂಕಿನ ಬಹುತೇಕ ಬಿಎಸ್ಎನ್ಎಲ್ ಟವರ್ಗಳು 15-20 ವರ್ಷಗಳ ಹಿಂದೆ ನಿರ್ಮಾಣವಾದವುಗಳು. ಅದರ ನಿರ್ವಹಣೆ ಸರೊಯಾಗಿ ನಡೆಯದ ಕಾರಣ, ಕಾಲಕಾಲಕ್ಕೆ ಬ್ಯಾಟರಿ ಅಳವಡಿಕೆ, ತಾಂತ್ರಿಕ ಸಮಸ್ಯೆ ಸರಿಪಡಿಸದ ಕಾರಣ ಇಲ್ಲಿನ ಟವರ್ ಮತ್ತು ನೆಟ್ವರ್ಕ್ ತೀರಾ ‘ವೀಕ್’ ಆಗುತ್ತಿದೆ ಎನ್ನುತ್ತಾರೆ ಸಾರ್ವಜನಿಕರು.