ಸುಳ್ಯ: ಬೆಲೆ ಬಾಳುವ ಸ್ಮಾರ್ಟ್ ಫೋನ್ ಕೈಯಲ್ಲಿ ಇದ್ದರೂ ಕರೆ ಮಾಡಲು ಆಗದ, ಕರೆ ಸ್ವೀಕರಿಸಲಾಗದ ಸ್ಥಿತಿ. ಇಂಟರ್ನೆಟ್ ಅಂತೂ ಆನ್ ಆಗುವುದೇ ಇಲ್ಲಾ. ಇದು ಸುಳ್ಯದ ಬಿಎಸ್ಎನ್ಎಲ್ ಗ್ರಾಹಕರ ಪಾಡು. ಸುಳ್ಯದಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಯಾವಾಗಲೂ ನಾಟ್ ರೀಚೇಬಲ್. ಇಲ್ಲಿನ ಮೊಬೈಲ್ ಗ್ರಾಹಕರು ನೆಟ್ವರ್ಕ್ ಸಮಸ್ಯೆಯಿಂದ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ನೆಟ್ ವರ್ಕ್ ಸಮಸ್ಯೆ ಸರಿಪಡಿಸುವಂತೆ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಹಲವು ಬಾರಿ
ಮನವಿ ಸಲ್ಲಿಸಿದರೂ ಫಲ ಮಾತ್ರ ಶೂನ್ಯ. ಇಲ್ಲಿನ ಗ್ರಾಹಕರ ಸಮಸ್ಯೆ ಕೇಳುವವರೂ, ಹೇಳುವವರೂ ಇಲ್ಲದ ಪರಿಸ್ಥಿತಿ. ನಿರ್ಮಾಣ ಆಗಿದೆ ಎಂಬುದು ಗ್ರಾಹಕರ ಅಳಲು.
ಸುಳ್ಯ ನಗರದ ಜಯನಗರ, ಹಳೇಗೇಟು ಭಾಗ ಸೇರಿದಂತೆ ನಗರದ ವಿವಿಧ ಕಡೆಯ ನೆಟ್ ವರ್ಕ್ ಕೈಕೊಟ್ಟಿದೆ. ಎರಡು ದಿನಗಳಿಂದ ಬಿಎಸ್ಎನ್ಎಲ್ ನೆಟ್ವರ್ಕ್ ಸಂಪೂರ್ಣ ಮಾಯವಾಗಿದೆ.ಯಾವುದೇ ಕರೆ ಹೋಗುವುದಾಗಲೀ ಬರುವುದಾಗಲೀ ಇಲ್ಲ. ಸಂಪೂರ್ಣ ಸ್ತಬ್ಧ.
ಕಳೆದ ಹಲವು ಸಮಯಗಳಿಂದ ಗ್ರಾಹಕರಿಗೆ ಸಮಸ್ಯೆ ತಲೆದೋರಿದ್ದರೂ ಇದೀಗ ಇನ್ನಷ್ಟು ಬಿಗಡಾಯಿಸಿದೆ. ಸೋಮವಾರ ಬೆಳಗ್ಗಿನಿಂದಲೇ ಜಯನಗರ, ಹಳೆಗೇಟು ಭಾಗದಲ್ಲಿ ನೆಟ್ವರ್ಕ್ ಸಿಗುತ್ತಿರಲಿಲ್ಲ. ಮಂಗಳವಾರವೂ ಸಮಸ್ಯೆ ಮುಂದುವರಿದಿದೆ. ನೆಟ್ವರ್ಕ್ ಕಡಿತವಾಗಿ ಕರೆ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣ ಆಗಿದೆ. ಕಳೆದ ಹಲವು ದಿನಗಳಿಂದ ಸುಳ್ಯ ನಗರದ ಹಲವು ಕಡೆಗಳಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆ ಬಿಗಡಾಯಿಸಿದೆ. ಕರೆ ಬರುವುದೂ ಇಲ್ಲ, ಹೋಗುವುದೂ ಇಲ್ಲಾ.
ಪದೇ ಪದೇ ನೆಟ್ವರ್ಕ್ ಕಡಿತವಾಗುವುದು, ಕರೆ ಮಾಡಿ ಮಾತನಾಡುತ್ತಿದ್ದಂತೆ ಅರ್ಧಕ್ಕೆ ಕರೆ ಕಟ್ ಆಗುವುದು. ಒಂದು ವೇಳೆ ಕರೆ ಸಿಕ್ಕಿದರೂ ಮಾತನಾಡುವುದು ಸರಿಯಾಗಿ ಕೇಳಿಸದೇ ಇರುವ ಸಮಸ್ಯೆ, ನೆಟ್ವರ್ಕ್ ತೋರಿಸುತ್ತಿದ್ದರೂ ನಾಟ್ ರೀಚೇಬಲ್ ಆಗುವುದು, ಕರೆ ಬಂದರೂ ಸ್ವೀಕರಿಸಲು ಆಗದ ಸ್ಥಿತಿ ಹೀಗೆ ಹಲವು ಸಮಸ್ಯೆ ತಲೆದೋರುತಿದೆ ಎಂದು ಗ್ರಾಹಕರು ದೂರಿದ್ದಾರೆ. ಮೊಬೈಲ್ಗೆ ಬಿಎಸ್ಎನ್ಎಲ್ ಇಂಟರ್ನೆಟ್ ಉಪಯೋಗಿಸುವವರ ಪಾಡಂತೂ ಹೇಳ ತೀರದು. ಕೆಲವೆಡೆ ವಿದ್ಯುತ್ ಕಡಿತ ಆದರೆ ಬ್ಯಾಟರಿ ವೀಕ್ ಆಗಿ ನೆಟ್ವರ್ಕ್ ಕಡಿತ ಆಗುವ ಸಮಸ್ಯೆ ಇದೆ. ಆದರೆ ಕರೆಂಟ್ ಇದ್ದರೂ ನೆಟ್ವರ್ಕ್ ಇರುವುದಿಲ್ಲ. ಪದೇ ಪದೇ ನೆಟ್ವರ್ಕ್ ಮಾಯವಾಗುತ್ತಾ ಇರುತ್ತದೆ.ನಗರ ಪ್ರದೇಶದಲ್ಲಿಯೇ ಬಿಎಸ್ಎನ್ಎಲ್ ಟವರ್ ಸಮಸ್ಯೆ ಹೀಗಾದರೆ ಸುಳ್ಯ ತಾಲೂಕಿನ ಗ್ರಾಮೀಣ ಭಾಗದ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ.ಹಲವು ಗ್ರಾಮಗಳಲ್ಲಿ ದಿನಗಟ್ಟಲೆ ನೆಟ್ವರ್ಕ್ ಇಲ್ಲದ ಸಮಸ್ಯೆ ಇದೆ. ಕೆಲವೆಡೆ ವಿದ್ಯುತ್ ಕಡಿತ ಆದ ಕೂಡಲೇ ನೆಟ್ವರ್ಕ್ ಕಡಿತಗೊಳ್ಳುತ್ತದೆ. ಇದೀಗ ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬಿಎಸ್ಎನ್ಎಲ್ ಟವರನ್ನು ಮಾತ್ರ ನಂಬಿರುವ ಹಲವು ಗ್ರಾಮಗಳ ಜನರಿಗೆ ನೆಟ್ವರ್ಕ್ ಸಮಸ್ಯೆ ಮುಗಿಯದ ಅಧ್ಯಾಯವಾಗಿದೆ.
ಸುಳ್ಯ ತಾಲೂಕಿನ ಬಹುತೇಕ ಟವರ್ಗಳು 15-20 ವರ್ಷಗಳ ಹಿಂದೆ ನಿರ್ಮಾಣವಾದವುಗಳು. ಅದರ ನಿರ್ವಹಣೆ ಸರಿಯಾಗಿ ನಡೆಯದ ಕಾರಣ, ಕಾಲಕಾಲಕ್ಕೆ ಬ್ಯಾಟರಿ ಅಳವಡಿಕೆ, ತಾಂತ್ರಿಕ ಸಮಸ್ಯೆ ಸರಿಪಡಿಸದ ಕಾರಣ ಇಲ್ಲಿನ ಟವರ್ ಮತ್ತು ನೆಟ್ವರ್ಕ್ ತೀರಾ ‘ವೀಕ್’ ಆಗುತ್ತಿದೆ ಎನ್ನುತ್ತಾರೆ ಸಾರ್ವಜನಿಕರು.