ಸುಳ್ಯ: ಅಡಿಕೆ ಕೃಷಿ ದಕ್ಷಿಣ ಕನ್ನಡ. ಜಿಲ್ಲೆಯ ಕೃಷಿಕರ ಪ್ರಮುಖ ಬೆಳೆ. ಇದನ್ನು ಅವಲಂಬಿಸಿ ಹಲವಾರು ಕುಟುಂಬಗಳು ಜೀವನ ಸಾಗಿಸುತ್ತಿದ್ದಾರೆ. ಆದುದರಿಂದ ಅಡಿಕೆ ಕೃಷಿಕರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯತೆ ಇದೆ ಎಂದು ದ.ಕ.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಹೇಳಿದ್ದಾರೆ.
ಸುಳ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಈ ಭಾಗದ
ಜನಪ್ರತಿನಿಧಿಯಾದರೆ ಅಡಿಕೆ ಕೃಷಿಕರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬ ಯೋಚನೆ ಇದೆ. ಅದಕ್ಕೆ ಪೂರಕವಾದ ಸಂಶೋಧನೆಗಳು ಆಗಬೇಕು. ಈಗ ಪರಿಹಾರ, ಸಂಶೋಧನೆ ನಡೆಯುತ್ತಾ ಇದೆ. ನಾವು ಮಾಡಬೇಕಾದುದು ಶಾಶ್ವತ ಪರಿಹಾರ ಆಗಬೇಕು. ಸಮಸ್ಯೆ ಬಾರದ ರೀತಿಯಲ್ಲಿ ಏನು ಮಾಡಬೇಕು ಎಂಬುದಕ್ಕೆ ಬೇಕಾದ ಸಂಶೋಧನೆ ಮತ್ತಿತರ ಕಾರ್ಯಗಳನ್ನು ಆದ್ಯತೆಯ ಮೇರೆಗೆ ಮಾಡಲಾಗುವುದು. ಜಿಲ್ಲೆಯ ಕೃಷಿಕರ ಹಿತದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ಸಿಕ್ಕಿರುವುದು ಸಂಭ್ರಮ ಮತ್ತು ಸಂತಸ ಉಂಟಾಗಿದೆ. ವಿಕಸಿತ ಭಾರತ ನಿರ್ಮಾಣ ಮಾಡುವ ಪ್ರಧಾನಿಯವರ ಸಂಕಲ್ಪಕ್ಕೆ ಪೂರಕವಾಗಿ ಜಿಲ್ಲೆಯನ್ನು ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಲಾಗುವುದು. ವಿಕಸಿತ ದಕ್ಷಿಣ ಕನ್ನಡ ರೂಪಿಸುವ ನಿಟ್ಟಿನಲ್ಲಿ ತಜ್ಞರ, ಜನರ, ವಿಷಯ ಪರಿಣಿತರ ಅಭಿಪ್ರಾಯ ಪಡೆದು ಯೋಜನೆ ರೂಪಿಸಲಾಗುವುದು. ಹಿಂದುತ್ವಕ್ಕೆ ತನ್ನ ಬದ್ಧತೆಯ ಜೊತೆಗೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.







