ಸುಳ್ಯ: ವ್ಯಕ್ತಿಯೊಬ್ಬರಿಂದ ಲಂಚ ಸ್ವಿಕಾರ ಮಾಡುತ್ತಿದ್ದ ಗ್ರಾಮ ಆಡಳಿತಾಧಿಕಾರಿ(ಗ್ರಾಮ ಕರಣಿಕ) ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಸುಳ್ಯದಲ್ಲಿ ನಡೆದಿದೆ. ಹಕ್ಕು ಖುಲಾಸೆಗೆ ಸಂಬಂಧಿಸಿ ಹಣದ ಬೆಡಿಕೆ ಇಟ್ಟು ಲಂಚ ಸ್ವೀಕರಿಸುತ್ತಿದ್ದಾಗ ಅರಂತೋಡು ಗ್ರಾಮ ಆಡಳಿತಾಧಿಕಾರಿ ಮಿಯಾಸಾಬ್ ಮುಲ್ಲ ಎಂಬವರನ್ನು ಲೋಕಾಯುಕ್ತ ಪೊಲೀಸರ ತಂಡ ಬಂದಿಸಿದೆ ಎಂದು ಲೋಕಾಯುಕ್ತ ಎಸ್ಪಿ ಸಿ.ಎ.ಸೈಮನ್ ಅವರು ಮಾಹಿತಿ ನೀಡಿದ್ದಾರೆ. ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ
ಅಡ್ತಲೆ ಎಂಬಲ್ಲಿ ಹರಿಪ್ರಸಾದ್ ಅಡ್ತಲೆ ಎಂಬವರಿಗೆ ಮಂಜೂರಾದ ಅಕ್ರಮ ಸಕ್ರಮ ಭೂಮಿಯ ಹಕ್ಕು ಖುಲಾಸೆಗಾಗಿ ಅರ್ಜಿ ಸಲ್ಲಿಸಿದ್ದರು. ಇದರ ವರದಿ ಸಲ್ಲಿಕೆಗಾಗಿ ಅರಂತೋಡು ಗ್ರಾಮ ಆಡಳಿತಾಧಿಕಾರಿ ಮಿಯಾಸಾಬ್ ಮುಲ್ಲಾ 8 ಸಾವಿರ ರೂ ಬೇಡಿಕೆ ಇಟ್ಟಿದ್ದರು. ಹರಿಪ್ರಸಾದ್ ಅವರಿಂದ ಮೂರು ಸಾವಿರ ಹಣ ಈ ಹಿಂದೆ ಪಡೆದಿದ್ದರು. ಉಳಿದ 5 ಸಾವಿರ ಹಣ ಹಣ ಸ್ವೀಕರಿಸುತ್ತಿದ್ದಾಗ ಗ್ರಾಮ ಆಡಳಿತಾಧಿಕಾರಿಯನ್ನು ಲೋಕಾಯುಕ್ತ ಬಂದಿಸಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಕಡತ ವಿಲೇವಾರಿಗೆ ಹಣ ಬೇಡಿಕೆ ಇರಿಸಿದ ಹಿನ್ನಲೆಯಲ್ಲಿ ಹರಿಪ್ರಸಾದ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.ಈ ಹಿನ್ನಲೆಯಲ್ಲಿ ಇಂದು ದಾಳಿ ನಡೆಸಿದ ಲೋಕಾಯುಕ್ತ ತಂಡ ಹಣ ಸ್ವೀಕರಿಸುತ್ತಿದ್ದ ಗ್ರಾಮ ಆಡಳಿತಾಧಿಕಾರಿಯನ್ನು ರೆಡ್ ಹ್ಯಾಂಡಾಗಿ ಬಂಧಿಸಿದೆ.
ಲೋಕಾಯುಕ್ತ ಎಸ್ಪಿ ಸೈಮನ್, ಡಿವೈಎಸ್ಪಿಗಳಾದ ಚೆಲುವರಾಜ್, ಕಲಾವತಿ, ಇನ್ಸ್ಪೆಕ್ಟರ್ ಅಮಾನುಲ್ಲಾ, ಮಹೇಶ್, ವಿನಾಯಕ, ವೈಶಾಲಿ, ರಾಜಪ್ಪ ಮತ್ತಿತರ ಲೋಕಾಯುಕ್ತ ಅಧಿಕಾರಿಗಳ ತಂಡ ನೇತೃತ್ವ ವಹಿಸಿದ್ದರು.