ಬಾಗಲಕೋಟೆ: ಅನರ್ಹರ ಬಿಪಿಎಲ್ ಕಾರ್ಡ್ಗಳು ಮಾತ್ರ ರದ್ದು ಮಾಡಲಾಗುವುದು. ಅರ್ಹರ ಕಾರ್ಡ್ಗಳಿಗೆ ತೊಂದರೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಬಾಗಲಕೋಟೆಯಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿಪಿಎಲ್ ಕಾರ್ಡ್ಗಳು ರದ್ದಾಗುತ್ತಿವೆ ಎನ್ನುವ
ಪ್ರಶ್ನೆಯೇ ಪೂರ್ತಿ ತಪ್ಪು.ಅನರ್ಹರ ಕಾರ್ಡ್ಗಳನ್ನು ವಾಪಾಸ್ ಪಡೆಯಬಹುದು ಎನ್ನುವ ಆಲೋಚನೆ ಮಾತ್ರ ನಮ್ಮದಾಗಿದೆ. ಇದಿನ್ನೂ ಆಹಾರ ಇಲಾಖೆ ಪರಿಶೀಲಿಸುತ್ತಿದೆ. ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಅನರ್ಹರಿಗೆ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಆದಾಯ ತೆರಿಗೆ ಪಾವತಿಸುವವರಿಗೂ, ಸರ್ಕಾರಿ ನೌಕರರಿಗೂ ಬಿಪಿಎಲ್ ಕಾರ್ಡ್ ಕೊಡಬೇಕಾ ಎಂದು ಮರು ಪ್ರಶ್ನಿಸಿದ ಸಿಎಂ, ಯಾವ ಕಾರ್ಡ್ಗಳೂ ರದ್ದಾಗುವುದಿಲ್ಲ. ಅನರ್ಹರಿಂದ ವಾಪಾಸ್ ಪಡೆಯಬಹುದು. ಅರ್ಹರು ವಂಚಿತರಾಗಬಾರದು ಎಂದರು.