ಸುಳ್ಯ: ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದೇನೆ. ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇನೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜಿನಾಮೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ, ಮಂಡಲ ಸಮಿತಿ ಅಧ್ಯಕ್ಷ ಹಾಗೂ ರೈತ ಮೋರ್ಚಾ ರಾಜ್ಯಾಧ್ಯಕ್ಷರಿಗೆ ಸಲ್ಲಿಸಿದ್ದೇನೆ.ಬಿಜೆಪಿಯ ಮಂಡಲ ಸಮಿತಿಯ ಹಾಗೂ ಬಿಜೆಪಿಯ ಕೆಲವು ನಾಯಕರ ನಡವಳಿಕೆಗಳು ಸರಿ ಕಾಣುತ್ತಿಲ್ಲ.ಪಕ್ಷದ ಚಟುವಟಿಕೆಗಳಲ್ಲಿ ತೃಪ್ತನಾಗಿಲ್ಲ. ಆದುದರಿಂದ ಕಳೆದ 8 ತಿಂಗಳಿನಿಂದ
ತಟಸ್ಥನಾಗಿದ್ದೇನೆ. ಇದೀಗ ರಾಜಿನಾಮೆ ನೀಡಿದ್ದೇನೆ ಎಂದು ಹೇಳಿದರು. ಬಿಜೆಪಿ ಈಗ ಕಾರ್ಯಕರ್ತರ ಪಕ್ಷವಾಗಿ ಉಳಿದಿಲ್ಲ.ಕಾರ್ಯಕರ್ತರ ಮಾತಿಗೆ ಪಕ್ಷದಲ್ಲಿ ಯಾವುದೇ ಬೆಲೆ ಇಲ್ಲ. ಕೆಲವೇ ಕೆಲವು ಮಂದಿಯ ಕೈಯಲ್ಲಿ ಪಕ್ಷ ಸಿಲುಕಿದೆ. ಕೆಲವು ಮುಖಂಡರನ್ನು ಒಳಗೊಂಡ ಕೋರ್ ಕಮಿಟಿಯೇ ಎಲ್ಲವನ್ನೂ ನಿರ್ಧರಿಸುತ್ತಿದೆ. ಬಿಜೆಪಿ ಎಂದರೆ ಕೋರ್ ಕಮಿಟಿ ಅಂತ ಆಗಿದೆ. ಸಹಕಾರಿ ಸಂಘದ ಚುನಾವಣೆ ಆಗಲಿ, ಗ್ರಾ.ಪಂ.ಚುನಾವಣೆ ಆಗಲಿ ಅಭ್ಯರ್ಥಿಗಳನ್ನು ನಾಯಕರೇ ನಿರ್ಧರಿಸುತ್ತಾರೆ.ಕಾರ್ಯಕರ್ತರ ಅಭಿಪ್ರಾಯಕ್ಕೆ ಬೆಲೆ ಇಲ್ಲ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ಯಾವುದೇ ಪಾರದರ್ಶಕತೆ ಇಲ್ಲ ಎಂದು ಆರೋಪಿಸಿದರು. ನನ್ನನ್ನು ಪಕ್ಷವು ಸಂಪೂರ್ಣ ದೂರ ಇಟ್ಟಿದ್ದಾರೆ. ಪಕ್ಷದ

ಯಾವುದೇ ಚಟುವಟಿಕೆ, ಕಾರ್ಯಕ್ರಮಗಳಿಗೆ ಕರೆಯುವುದಿಲ್ಲ. ತನ್ನ ಊರಿನಲ್ಲಿ ಪಕ್ಷದ ಸಭೆ ನಡೆದರೂ ತಿಳಿಸುವುದಿಲ್ಲ. ನಾನು ಜನರ ಕೆಲಸ ಮಾಡುತ್ತಾ ಬಂದವನು. ಆದರೆ ಈಗ ಈ ಪಕ್ಷದಲ್ಲಿ ಇದ್ದು ಜನರ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಪಕ್ಷದಲ್ಲಿ ಉಸಿರು ಕಟ್ಟುವ ವಾತಾವರಣ ಇದೆ. ಜನರ ಕೆಲಸ ಮಾಡಲು ಕಷ್ಟ ಆಗುವ ಸಂದರ್ಭದಲ್ಲಿ ಅಲ್ಲಿಂದ ಹೊರ ಬರುವುದೇ ಲೇಸು ಎಂದು ರಾಜಿನಾಮೆ ನೀಡುತ್ತಿದ್ದೇನೆ.
ಸಹಕಾರಿ ಸಂಘದ ಚುನಾವಣೆಯಲ್ಲಿ ಸ್ಪರ್ಧೆ ನಡೆಸಲು ಅವಕಾಶ ನೀಡಿದರೂ, ಒಂದು ಗುಂಪು ತನ್ನನ್ನು ಸೋಲಿಸಲು ಪ್ರಯತ್ನ ನಡೆಸಿದರು. ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ತನಗೆ ಗೊತ್ತಿಲ್ಲದೆ ಬದಲಾವಣೆ ಮಾಡಿದರು.ಬೊಳ್ಳೂರು ಪಕ್ಷ ಬಿಟ್ಟು ಹೋದರೂ ತೊಂದರೆ ಇಲ್ಲಾ ಎಂದು ಕೆಲವು ಮುಖಂಡರು ಹೇಳಿರುವುದು ಗಮನಕ್ಕೆ ಬಂದಿದೆ ಎಂದು ರಾಧಾಕೃಷ್ಣ ಬೊಳ್ಳೂರು ಹೇಳಿದರು.
ತನ್ನದೇ ಆದ ಸಿದ್ಧಾಂತದ ಮೇಲೆ ರಾಜಕಾರಣ ಮಾಡುತ್ತಾ ಬಂದಿದ್ದೇನೆ. ಅದರಲ್ಲಿ ಯಾವತ್ತೂ ರಾಜಿ ಮಾಡುವುದಿಲ್ಲ ಎಂದ ಬೊಳ್ಳೂರು ವೈಯುಕ್ತಿಕವಾಗಿ ಯಾರ ಮೇಲೂ ದ್ವೇಷ ಇಲ್ಲ. ಬಿಜೆಪಿಯಲ್ಲಿ ಇಂದು ಡಾಮಿನೇಟ್ ಸಂಸ್ಕೃತಿ, ಗುಂಪುಗಾರಿಕೆ ಹೆಚ್ಚಿದೆ. ಸ್ವಾಭಿಮಾನಿ ಬಣವನ್ನು ಸಂಪೂರ್ಣ ವಿರೋಧಿಸಬೇಕು ಎಂದು ಮಂಡಲ ಸಮಿತಿ ಹಿಂದೆ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ನಿರ್ದೇಶನ ನೀಡಿತ್ತು. ಆದರೆ ಮುಖಂಡರು ಇದ್ದಕ್ಕಿದ್ದಂತೆ ರಾಜಿ ಮಾಡಿಕೊಂಡರು. ಆದರೆ ಕಾರ್ಯಕರ್ತರಿಗೆ ಇದಕ್ಕೆ ಒಗ್ಗಿಕೊಳ್ಳಲು ಆಗಲಿಲ್ಲ. ಅದರ ಫಲವಾಗಿ ಸ್ವಾಭಿಮಾನಿ ಮತ್ತು ಬಿಜೆಪಿ ಮುಖಂಡರು ಒಟ್ಟಾದರು. ನೈಜ ಬಿಜೆಪಿ ಕಾರ್ಯಕರ್ತರು ಮಾತ್ರ ಬೇರೆ ಆಗಿದ್ದಾರೆ ಎಂದು ಹೇಳಿದರು.

ಅಂಗಾರರನ್ನು ನಡೆಸಿದ ರೀತಿ ನೋವು ತಂದಿದೆ:
30 ವರ್ಷಗಳ ಕಾಲ ಶಾಸಕರು, ಸಚಿವರು ಆಗಿದ್ದ ಎಸ್.ಅಂಗಾರ ಅವರನ್ನು ಬಿಜೆಪಿ ನಡೆಸಿಕೊಂಡ ರೀತಿ ನೋವು ತಂದಿದೆ ಎಂದು ರಾಧಾಕೃಷ್ಣ ಬೊಳ್ಳೂರು ಹೇಳಿದರು. ಚುನಾವಣೆ ಸಂದರ್ಭದಲ್ಲಿ ಅವರಿಗೆ ಸೀಟ್ ಇಲ್ಲಾ ಎಂದು ತಿಳಿಸದೆ ಇದ್ದದು ಸರಿಯಾದ ಕ್ರಮ ಅಲ್ಲ. ಈಗ ಪಕ್ಷದ ಚಟುವಟಿಕೆಗಳಿಗೆ ಅಂಗಾರರನ್ನು ಕರೆಯುತ್ತಿಲ್ಲ. ಅಂಗಾರರು ತಂದ ಅನುದಾನದ ಕಾಮಗಾರಿಯ ಉದ್ಘಾಟನೆ ನಡೆಸುವ ಸಂದರ್ಭದಲ್ಲಿ ಸೌಜನ್ಯಕ್ಕಾದರೂ ಅವರನ್ನು ಕರೆಯುತ್ತಿಲ್ಲ. ಬಿಜೆಪಿಯ ಕೋರ್ ಕಮಿಟಿಗೂ ಅಂಗಾರರನ್ನು ಸೇರಿಸಿಲ್ಲ. ಈಗ ಇರುವ ನಾಯಕರನ್ನು ಅಂಗಾರರೇ ಬೆಳೆಸಿದ್ದಾರೆ. ಆದರೆ ಅವರೇ ಇಂದು ಅಂಗಾರರನ್ನು ಕಡೆಗಣಿಸುತ್ತಿದ್ದಾರೆ ಎಂದು ಬೊಳ್ಳೂರು ಹೇಳಿದರು. ತಾನು ಬಿಜೆಪಿಗೆ ರಾಜಿನಾಮೆ ನೀಡುವ ವಿಚಾರ ಅಂಗಾರರಿಗೆ ತಿಳಿಸಿಲ್ಲ. ವೈಯುಕ್ತಿಕ ವಿಚಾರ ಆದ ಕಾರಣ ಈ ವಿಷಯ ಅಂಗಾರರಿಗೆ ತಿಳಿಸಿಲ್ಲ ಎಂದರು.
ಮುಂದಿನ ನಿರ್ಧರ ಏನು?
ತನ್ನ ಮಿತ್ರರ ಹಾಗು ಬೆಂಬಲಿಗರ ಜೊತೆ ಮಾತುಕತೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ತಟಸ್ಥನಾಗಿ ಇರಲೂಬಹದು, ಕಾಂಗ್ರೆಸ್ ಸೇರ್ಪಡೆ ಆಗಲೂಬಹುದು ಎಂದು ಹೇಳಿದರು.ಮುಂದಿನ ರಾಜಕೀಯ ನಡೆಯ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಪ್ರಕಟಿಸುತ್ತೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಾಜಿ ಗ್ರಾಮ ಸಮಿತಿ ಅಧ್ಯಕ್ಷ
ಸತ್ಯಪ್ರಸಾದ್ ಪುಳಿಮಾರಡ್ಕ, ಸಹಕಾರಿ ಸಂಘದ ಮಾಜಿ ನಿರ್ದೇಶಕ ಡಿ.ಕೆ.ಸುರೇಶ್, ಬೂತ್ ಸಮಿತಿ ಮಾಜಿ ಅಧ್ಯಕ್ಷ ರಾಘವ ಕುಕ್ಕುಜಡ್ಕ, ಆನಂದ ಮೂಕಮಲೆ ಉಪಸ್ಥಿತರಿದ್ದರು












