ಸುಳ್ಯ:ಕೆ.ಎಫ್.ಡಿ.ಸಿ ಕಾರ್ಮಿಕರ ವಸತಿಗಳ ವಿದ್ಯುತ್ ಸಂಪರ್ಕದ ಮೆಸ್ಕಾಂ ಭದ್ರತಾ ಠೇವಣಿಯನ್ನು ನಿಗಮದ ವತಿಯಿಂದಲೇ ಪಾವತಿಸಲು ಆದೇಶ ಮಾಡಲಾಗಿದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ತಿಳಿಸಿದ್ದಾರೆ. ಕೆ.ಎಫ್.ಡಿ.ಸಿ ನಿಗಮದ ಸಿಬ್ಬಂದಿಗಳು ಹಾಗೂ ಕಾರ್ಮಿಕರು ವಾಸಿಸುತ್ತಿರುವ ವಸತಿಗಳು
ನಿಗಮದ ಆಸ್ತಿಯಾಗಿದ್ದು , ಮೆಸ್ಕಾಂ ಆದೇಶದನ್ವಯ ಎಲ್ಲಾ ವಿದ್ಯುತ್ ಸಂಪರ್ಕಗಳು ಭದ್ರತಾ ಠೇವಣಿಯನ್ನು ಪಾವತಿಸಬೇಕಿತ್ತು. ಅದೇ ರೀತಿಯಾಗಿ ಕೆ.ಎಫ್.ಡಿ.ಸಿ ಕಾರ್ಮಿಕರ ವಸತಿ ಕಾಲೋನಿಗಳ ಭದ್ರತಾ ಠೇವಣಿಯನ್ನು ಮೆಸ್ಕಾಂ ಕಾರ್ಮಿಕರಿಂದ ವಸೂಲಿ ಮಾಡಲು ನೋಟೀಸ್ ನೀಡಿದ್ದರು.ಭದ್ರತಾ ಠೇವಣಿಯನ್ನು ಪಾವತಿಸಲಾಗದ ವಸತಿ ಗೃಹಗಳ ವಿದ್ಯುತ್ ಸಂಪರ್ಕಗಳನ್ನು ಖಡಿತಗೊಳಿಸುತ್ತಿದ್ದರು.
ಈ ವಿಷಯವನ್ನು ಕಾರ್ಮಿಕರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಗಮನಕ್ಕೆ ತಂದಿದ್ದರು.ಈ ಕುರಿತು ಸಮಗ್ರ ಮಾಹಿತಿಯನ್ನು ಕೆ.ಎಫ್.ಡಿ.ಸಿ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕರ ಮತ್ತು ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತಂದು ವಿವರಿಸಿದ ಹಿನ್ನಲೆಯಲ್ಲಿ ಭದ್ರತಾ ಠೇವಣಿಯನ್ನು ನಿಗಮದಿಂದಲೇ ಪಾವತಿಸುವಂತೆ ಆದೇಶ ಮಾಡಲಾಗಿದೆ ಎಂದು ರಾಧಾಕೃಷ್ಣ ಬೊಳ್ಳೂರು ತಿಳಿಸಿದ್ದಾರೆ.










