ಪರ್ತ್: ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯ ನಾಳೆಯಿಂದ(ನ.22) ಆರಂಭವಾಗಲಿದೆ.ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐದು ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ.ಈ ಪಂದ್ಯಕ್ಕೆ ಎರಡನೇ ಮಗುವಿನ ಜನನದ ಹಿನ್ನೆಲೆಯಲ್ಲಿ ನಾಯಕ ರೋಹಿತ್ ಶರ್ಮಾ ಅಲಭ್ಯರಾಗಿದ್ದಾರೆ. ರೋಹಿತ್ ಎರಡನೇ ಪಂದ್ಯದ ವೇಳೆ ತಂಡವನ್ನು
ಸೇರಿಕೊಳ್ಳುವ ನಿರೀಕ್ಷೆಯಿದೆ.ಖಾಯಂ ನಾಯಕ ರೋಹಿತ್ ಅನುಪಸ್ಥಿತಿಯಲ್ಲಿ ಉಪನಾಯಕ ಜಸ್ಪ್ರೀತ್ ಬೂಮ್ರಾ ತಂಡವನ್ನು ಮುನ್ನಡೆಸಲಿದ್ದಾರೆ.ಇತ್ತೀಚೆಗೆ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 0-3 ಅಂತರದ ಕ್ಲೀನ್-ಸ್ವೀಪ್ ಮುಖಭಂಗಕ್ಕೊಳಗಾಗಿತ್ತು.ಆದರೆ ಈ ಟೆಸ್ಟ್ ಸರಣಿಯು ಆಸೀಸ್ ವಿರುದ್ಧದ ಸರಣಿಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಬೂಮ್ರಾ ಹೇಳಿದ್ದಾರೆ.
‘ಯಾವುದೇ ಪಂದ್ಯ ಗೆದ್ದಾಗಲೂ ಶೂನ್ಯದಿಂದಲೇ ಪ್ರಾರಂಭಿಸುತ್ತೇವೆ. ಪಂದ್ಯ ಸೋತಾಗಲೂ ಶೂನ್ಯದಿಂದಲೇ ಆರಂಭಿಸುತ್ತೇವೆ. ನ್ಯೂಜಿಲೆಂಡ್ ಸರಣಿಯಲ್ಲಿ ಮಾಡಿದ ತಪ್ಪಿನಿಂದ ಪಾಠಗಳನ್ನು ಕಲಿತಿದ್ದೇವೆ. ಆದರೆ ಇಲ್ಲಿನ ಪರಿಸ್ಥಿತಿ ಭಿನ್ನವಾಗಿದೆ. ಇಲ್ಲಿ ನಮ್ಮ ಫಲಿತಾಂಶವೂ ವಿಭಿನ್ನವಾಗಿದೆ’ ಎಂದು ಹೇಳಿದ್ದಾರೆ.ರೋಹಿತ್ ಅನುಪಸ್ಥಿತಿಯಲ್ಲಿ ಯಶಸ್ವಿ ಜೈಸ್ವಾಲ್ ಜೊತೆ ಕರ್ನಾಟಕದ ಕೆ.ಎಲ್. ರಾಹುಲ್ ಇನಿಂಗ್ಸ್ ಆರಂಭಿಸುವ ನಿರೀಕ್ಷೆಯಿದೆ. ಆದರೆ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಶುಭಮನ್ ಗಿಲ್ ಪಂದ್ಯಕ್ಕೆ ಲಭ್ಯರಾಗಲಿದ್ದಾರೆಯೇ ಎಂಬುದು ಇನ್ನೂ ಖಚಿತಗೊಂಡಿಲ್ಲ. ಆಡುವ ಹನ್ನೊಂದರ ಬಳಗವನ್ನು ಟಾಸ್ ಬಳಿಕ ಘೋಷಿಸಲಾಗುವುದು ಎಂದು ನಾಯಕ ಬುಮ್ರಾ ಹೇಳಿದ್ದಾರೆ.