ಸುಳ್ಯ:ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಲ್ಲಿ ಹೈಕಮಾಂಡ್ ನಿರ್ಧಾರ ಅಂತಿಮ. ಹೈಕಮಾಂಡ್ ಯಾರನ್ನು ಅಭ್ಯರ್ಥಿ ಎಂದು ಘೋಷಿಸಿದರೂ ಗೆಲ್ಲಿಸಲು ಪ್ರಯತ್ನ ನಡೆಸುತ್ತೇವೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಹೇಳಿದ್ದಾರೆ.ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಯ ಹಾಗು ಕಡಬ
ಬ್ಲಾಕ್ಗಳನ್ನೊಳಗೊಂಡ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಜಿ. ಕೃಷ್ಣಪ್ಪ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಎಂದು ಹೈಕಮಾಂಡ್ ಪ್ರಕಟಿಸಿರುತ್ತದೆ. ಇದನ್ನು ಸುಳ್ಯ ಕಾಂಗ್ರೆನ್ಸ್ ಒಪ್ಪಿಕೊಂಡಿರುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ಸುಳ್ಯ
ಬ್ಲಾಕ್ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಸುಳ್ಯದಿಂದ 6 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಮೂರು ಹೆಸರುಗಳನ್ನು ಬ್ಲಕ್ನಿಂದ ಕಳುಹಿಸಿಕೊಡಬೇಕೆಂದು ಹೈಕವಾಂಡ್ ತಿಳಿಸಿದ ಮೇರೆಗೆ ಹೆಚ್.ಎಂ.ನಂದಕುಮಾರ್,ಜಿ ಕೃಷ್ಣಪ್ಪ, ಮಹಿಳೆ ಎಂಬ ನೆಲೆಯಲ್ಲಿ ಅಪ್ಪಿ ಅವರನ್ನು ಒಳಗೊಂಡಂತೆ 3 ಹೆಸರನ್ನು ವೀಕ್ಷಕರಿಗೆ ಕಳುಹಿಸಿ ಕೊಡಲಾಗಿತ್ತು. ಜಿಲ್ಲಾ ಕಾಂಗ್ರೇಸ್ ಕಛೇರಿಯಲ್ಲಿ ರೆಹಮಾನ್ ಖಾನ್ ನೇತೃತ್ವದ ವೀಕ್ಷಕರ ತಂಡ ರಾಜ್ಯದಿಂದ ಆಗಮಿಸಿ ಅರ್ಜಿ ಸಲ್ಲಿಸಿದ ಎಲ್ಲಾ ಆಕಾಂಕ್ಷಿಗಳನ್ನು ಕರೆಯಿಸಿ ಇವರಲ್ಲಿ ಅಭಿಪ್ರಾಯ ಸಂಗ್ರಹಿಸಿ ಪಟ್ಟಿಯನ್ನು ರಾಜ್ಯ ಸಮಿತಿಗೆ ರವಾನಿಸಲಾಗಿತ್ತು.ತದನಂತರ ರಾಜ್ಯ ಚುನಾವಣಾ ಸಮಿತಿ, ಸ್ಕ್ರೀನಿಂಗ್ ಕಮಿಟಿ, ಆರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿ ಕೇಂದ್ರ ಚುನಾವಣಾ ಸಮಿತಿಗೆ ಹೆಸರನ್ನು ಕಳುಹಿಸಿ ಅಂತಿಮವಾಗಿ

ಪ್ರಕಟಿಸಿರುತ್ತಾರೆ. ಅಭ್ಯರ್ಥಿ ಆಯ್ಕೆಯ ಅಸಮಾಧಾನ ಕುರಿತು ಈಗಾಗಲೇ ವರಿಷ್ಠರಿಗೆ ಕಾರ್ಯಕರ್ತರು ಅಹವಾಲು ಸಲ್ಲಿಸಿರುತ್ತಾರೆ. ಇದಕ್ಕೆ ಹೈಕಮಾಂಡ್ ಸೂಕ್ತ ಪರಿಹಾರ ಕಂಡುಕೊಳ್ಳುತ್ತದೆ ಎಂಬ ವಿಶ್ವಾಸ ನಮ್ಮದು. ಮತ್ತು ಪಕ್ಷದ ಹೈಕಮಾಂಡ್ ನೀಡಿದ ಯಾವುದೇ ಅಭ್ಯರ್ಥಿಯ ಗೆಲುವಿಗೆ ಪ್ರಯತ್ನ ನಡೆಸುತ್ತೇವೆ ಎಂದರು. ಜಿ.ಕೃಷ್ಣಪ್ಪ ಸುಳ್ಯ ಬ್ಲಾಕ್ನ ಕೆಪಿಸಿಸಿ ಸಂಯೋಜಕರಾಗಿ, ಹೆಚ್ ಎಂ ನಂದಕುಮಾರ್ ಕಡಬ ಬ್ಲಾಕ್ನ ಕೆಪಿಸಿಸಿ ಸಂಯೋಜಕರಾಗಿ ಪಕ್ಷ ಸಂಘಟನೆ, ಸಮಾಜಸೇವೆ, ನಾಯಕರ ಕಾರ್ಯಕರ್ತರ ಸಂವಹನದಲ್ಲಿ ಕಳೆದ ಕೆಲವು ವರ್ಷಗಳಿಂದ ತೊಡಗಿಸಿಕೊಂಡಿರುತ್ತಾರೆ. ಇದನ್ನು ಗಮನಿಸಿಯೇ ವೀಕ್ಷಕರ ತಂಡಕ್ಕೆ ಇವರ ಹೆಸರನ್ನು ಶಿಫರಸ್ಸು ಮಾಡಲಾಗಿದೆ ಎಂದು ವಿವರಿಸಿದರು. ಅಸಮಾಧಾನಗೊಂಡ ಎಲ್ಲಾ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿ ಗೊಂದಲವನ್ನು ಪರಿಹರಿಸುತ್ತೇವೆ ಎಂದು ಅವರು ಹೇಳಿದರು. ಕಾರ್ಯಕರ್ತರ ಅಪೇಕ್ಷೆಯಂತೆ ಕಾಂಗ್ರೆಸ್ ಅಭ್ಯರ್ಥಿ ಬದಲಾಗಲಿದೆಯೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಅದು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟದ್ದು. ಹೈಕಮಾಂಡ್ ಯಾರಿಗೆ ಬಿಫಾರಂ ನೀಡಿದರೂ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ದ.ಕ.ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಭರತ್ ಮುಂಡೋಡಿ, ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್,ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್ ಕಾಂಗ್ರೆಸ್ ಮುಖಂಡರಾದ ಡಾ.ಬಿ.ರಘು, ಎನ್.ಜಯಪ್ರಕಾಶ್ ರೈ, ಎಸ್.ಸಂಶುದ್ದೀನ್, ಕೆ.ಎಂ.ಮುಸ್ತಫ, ಸದಾನಂದ ಮಾವಜಿ, ಇಸ್ಮಾಯಿಲ್ ಪಡ್ಪಿನಂಗಡಿ, ಶಾಫಿ ಕುತ್ತಮೊಟ್ಟೆ,ಹಮೀದ್ ಕುತ್ತಮೊಟ್ಟೆ, ಜಯಪ್ರಕಾಶ್ ನೆಕ್ರಪ್ಪಾಡಿ, ಚಂದ್ರಲಿಂಗಂ, ಸುರೇಶ್ ಅಮೈ, ಶಿವರಾಮ ಅಮೈ ಗಂಗಾಧರ ಮೇನಾಲ ಮತ್ತಿತರರು ಉಪಸ್ಥಿತರಿದ್ದರು.