ಸುಳ್ಯ:ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಗೆ ತಿದ್ದುಪಡಿ ತಂದು ಹೆಸರು ಬದಲಾವಣೆ, ಯೋಜನೆ ಬದಲಾವಣೆ ಮಾಡಿರುವುದನ್ನು ವಿರೋಧಿಸಿ ಕಾಂಗ್ರೆಸ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ) ನರೇಗಾ ಬಚವೋ ಸಂಗ್ರಾಮ್ ಪಾದಯಾತ್ರೆ ಫೆ.9ರಿಂದ 12ರ ತನಕ ಸುಳ್ಯದಿಂದ ಮೂಲ್ಕಿವರೆಗೆ ನಡೆಯಲಿದೆ ಎಂದು
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. ನರೇಗಾ ಯೋಜನೆಯಿಂದ ಅದೇಷ್ಟೋ ಜನರು ಬದುಕು ಕಟ್ಟಿಕೊಂಡಿದ್ದಾರೆ. ಜನಪರ ಯೋಜನೆಯಾಗಿದ್ದ ಈ ಯೋಜನೆಯನ್ನು ಪುನರ್ ಸ್ಥಾಪಿಸಲು ಒತ್ತಾಯಿಸಿ ಪ್ರತಿಭಟನಾ ಸೂಚಕವಾಗಿ ಕಾಂಗ್ರೆಸ್ ವತಿಯಿಂದ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಫೆ.9ರಂದು ಬೆಳಗ್ಗೆ 9 ಗಂಟೆಗೆ ಸುಳ್ಯದ ಗಾಂಧಿನಗರದಲ್ಲಿ ಪಾದಾಯತ್ರೆಗೆ ಚಾಲನೆ ದೊರೆಯಲಿದೆ.
ಗಾಂಧಿನಗರದ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮೂಲಕ ಪಾದಯಾತ್ರೆ ಆರಂಭಗೊಳ್ಳಲಿದೆ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ. ಕಡಬ ಬ್ಲಾಕ್ನವರೂ ಸುಳ್ಯದವರೊಂದಿಗೆ ಸೇರಿಕೊಳ್ಳಲಿದ್ದಾರೆ. ಸುಳ್ಯದಿಂದ ಆರಂಭಗೊಳ್ಳುವ ಪಾದಯಾತ್ರೆ ಪೈಚಾರ್, ಜಾಲ್ಸೂರು ಮೂಲಕ ಮಧ್ಯಾಹ್ನ ಕನಕಮಜಲು ತಲುಪಲಿದೆ. ಅಪರಾಹ್ನ ಪುತ್ತೂರು ಗಡಿ ಪೆರ್ನಾಜೆಗೆ ತಲುಪಿದ ವೇಳೆ ಪಾದಾಯಾತ್ರೆಗೆ ಪುತ್ತೂರಿನ ಜನತೆ ಸೇರಿಕೊಂಡು ಬರಮಾಡಿಕೊಳ್ಳಲಿದ್ದಾರೆ.ಸಂಜೆ 6ಕ್ಕೆ ಪಾದಯಾತ್ರೆ ಪುತ್ತೂರಿನ ಕುಂಬ್ರ ತಲುಪಲಿದ್ದು, ಅಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಫೆ.10ರಂದು ಪಾದಯಾತ್ರೆ ಮುಂದುವರಿಯಲಿದೆ. ಪುತ್ತೂರಿನಿಂದ ಕಬಕ ಮೂಲಕ ಮಾಣಿ ತಲುಪಿ ಮಾಣಿಯಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಫೆ.11ರಂದು ಮಾಣಿಯಿಂದ ಆರಂಭಗೊಂಡು, ಮಂಗಳೂರು ಅಡ್ಯಾರ್ ತಲುಪಿ ಸಂಜೆ ಸಾರ್ವಜನಿಕ ಸಭೆ ನಡೆಯಲಿದೆ. ಫೆ.12ರಂದು ಅಡ್ಯಾರ್ನಿಂದ ಆರಂಭಗೊಂಡ ಪಾದಯಾತ್ರೆ ಮೂಲ್ಕಿಗೆ ತಲುಪಿ ಅಲ್ಲಿ ಪಾದಯಾತ್ರೆ ಸಮಾಪನಾಗೊಳ್ಳಲಿದೆ.
ಪಾದಯಾತ್ರೆಯಲ್ಲಿ ಜಿಲ್ಲೆಯ 15 ಬ್ಲಾಕ್ನವರು ಭಾಗವಹಿಸಲಿದ್ದಾರೆ. ಜಿಲ್ಲೆಯಲ್ಲಿ ಸುಮಾರು 120 ಕಿ.ಮೀ.ಗೂ ಅಧಿಕ ದೂರ ಕ್ರಮಿಸಲಿರುವ ಪಾದಯಾತ್ರೆಯಲ್ಲಿ ಕೇಂದ್ರ ಸರಕಾರದ ಯೋಜನೆ ಬದಲಾವಣೆ ವಿರುದ್ಧ ಜನರಿಗೆ ತಿಳಿಸಲಿದ್ದೇವೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ,ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಾಧಾಕೃಷ್ಣ ಬೊಳ್ಳೂರು,ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ಶಶಿಧರ, ಡಿಸಿಸಿ ಸದಸ್ಯ ಫವಾಜ್ ಕನಕಮಜಲು, ಬ್ಲಾಕ್ ಮಾಧ್ಯಮ ವಕ್ತಾರ ನಂದರಾಜ್ ಸಂಕೇಶ್, ಪರಿಶಿಷ್ಟ ಜಾತಿ ಘಟಕ ಅಧ್ಯಕ್ಷ ಮಹೇಶ್ ಬೆಳ್ಳಾರ್ಕಾರ್, ಕೇಶವ ಮೊರಂಗಲ್ಲು, ಮಂಜುನಾಥ್ ಮಡ್ತಿಲ ಇದ್ದರು.





