ಸುಳ್ಯ:ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿ ವಿವಾದ ಸಂಬಂಧಿಸಿ ಪರಿಶೀಲನೆ ನಡೆಸಲು ಕೆಪಿಸಿಸಿ ವೀಕ್ಷಕರು ಇಂದು ಸುಳ್ಯಕ್ಕೆ ಆಗಮಿಸಿ ಅಭಿಪ್ರಾಯ ಸಂಗ್ರಹ ಆರಂಭಿಸಿದ್ದಾರೆ.ವೀಕ್ಷಕರ ತಂಡದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಎಂ. ನಾರಾಯಣ ಸ್ವಾಮಿ, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಆಗಮಿಸಿ

ಸದರ್ನ್ ರೆಸಿಡೆನ್ಸಿಯಲ್ಲಿ ಅಭಿಪ್ರಾಯ ಸಂಗ್ರಹ ನಡೆಸುತ್ತಿದ್ದಾರೆ.
ಮುಚ್ಚಿದ ಕೋಣೆಯಲ್ಲಿ ಒಬ್ಬೊಬ್ಬರನ್ನೇ ಕರೆಸಿ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಮೊದಲು ಕೆಪಿಸಿಸಿ ಹಂತದ ನಾಯಕರು, ಬಳಿಕ ಜಿಲ್ಲಾ ಮಟ್ಟದ ನಾಯಕರು, ಬಳಿಕ ಬ್ಲಾಕ್ ಮಟ್ಟದ ನಾಯಕರಿಂದ ಅಭಿಪ್ರಾಯ ಪಡೆಯುತ್ತಿದ್ದಾರೆ. ನಾಯಕರಿಂದ, ಪದಾಧಿಕಾರಿಗಳಿಂದ ಅಭಿಪ್ರಾಯ ಪಡೆದ ಬಳಿಕ ಕಾರ್ಯಕರ್ತರಿಂದ ಅಭಿಪ್ರಾಯ ಪಡೆಯಲಿದ್ದಾರೆ.ಸದರ್ನ್ ರೆಸಿಡೆನ್ಸಿ ಪರಿಸರದಲ್ಲಿ ಭಾರೀ ಸಂಖ್ಯೆಯಲ್ಲಿ ನಾಯಕರು, ಕಾರ್ಯಕರ್ತರು ಜಮಾಯಿಸಿದ್ದಾರೆ.
ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ ಸಂಗ್ರಹಿಸಿ ವರದಿಯನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲಿಸಲಿದ್ದಾರೆ.





