ಸುಳ್ಯ: ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತಿಸ್ಗಡ ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿರುವ ಹಿನ್ನಲೆಯಲ್ಲಿ ಸುಳ್ಯ ಬಿಜೆಪಿ ಮಂಡಲ ಸಮಿತಿಯ ವತಿಯಿಂದ ವಿಜಯೋತ್ಸವ ಆಚರಿಸಿದರು. ಮಂಡಲ ಸಮಿತಿ ಪಕ್ಷದ ಕಚೇರಿಯ ಮುಂಭಾಗದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿಹಂಚಿ, ವಿಜಯೋತ್ಸವ ಆಚರಿಸಿದರು. ಬಿಜೆಪಿ ಮಂಡಲ
ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ ‘ಅಲ್ಲಿಯ ಜನತೆ ಕಾಂಗ್ರೆಸ್ಸಿನ ಗ್ಯಾರಂಟಿಗಳ ಹಿಂದೆ ಹೋಗದೆ ಅದನ್ನು ಧಿಕ್ಕರಿಸಿ, ದೇಶದ ಸುರಕ್ಷತೆಯ ದೃಷ್ಟಿಯಿಂದ ನರೇಂದ್ರ ಮೋದಿಯವರ ಆಡಳಿತವನ್ನು ಮೆಚ್ಚಿ ಮತ ನೀಡಿದ್ದಾರೆ. ಈ ಚುನಾವಣೆ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ.ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿ ಆಗಿದ್ದರೂ ಬಿಜೆಪಿ ಗೆಲುವು ನಿಶ್ಚಿತ. ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಸುಮಾರು 60 ಸಾವಿರ ಮತಗಳ ಅಂತರದಿಂದ ಗೆಲ್ಲಿಸುವ ಜವಾಬ್ದಾರಿ ನಮ್ಮ ಮುಂದಿದೆ ಎಂದರು. ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ ಮಾತನಾಡಿ ‘ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸುಮಾರು 400 ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಮೂರನೇ ಬಾರಿಗೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ನ.ಪಂ. ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಮಾತನಾಡಿದರು. ಬಿಜೆಪಿ ಮುಖಂಡರಾದ ಎನ್.ಎ. ರಾಮಚಂದ್ರ, ಸಂತೋಷ್ ಕುತ್ತಮೊಟ್ಟೆ, ಕೇಶವ ಅಡ್ತಲೆ, ಬೂಡು ರಾಧಾಕೃಷ್ಣ ರೈ, ಚನಿಯ ಕಲ್ತಡ್ಕ,ಸುನಿಲ್ ಕೇರ್ಪಳ, ಜಗದೀಶ್ ರೈ ಸರಳಿಕುಂಜ, ಶೀನಪ್ಪ ಬಯಂಬು, ಜಿನ್ನಪ್ಪ ಪೂಜಾರಿ, ಅಶೋಕ ಅಡ್ಕಾರು, ಮಹೇಶ್ ಕುಮಾರ್ ಮೇನಾಲ, ಗುರುದತ್ ನಾಯಕ್, ಸುಧಾಕರ ತೊಡಿಕಾನ, ಗಿರೀಶ್, ಕೇಶವ ಸಿ.ಎ., ಎ.ಟಿ. ಕುಸುಮಾಧರ, ಕಿರಣ್ ಕುರುಂಜಿ, ಶ್ರೀಮತಿ ಕಿಶೋರಿ ಶೇಟ್, ಶ್ರೀಮತಿ ಶಶಿಕಲಾ ನೀರಬಿದಿರೆ ಮತ್ತಿತರರು ಉಪಸ್ಥಿತರಿದ್ದರು.












