ಸುಳ್ಯ:ರಾಜ್ಯ ಬಿಜೆಪಿ ನೇತೃತ್ವದಲ್ಲಿ ನಡೆಯುತ್ತಿರುವ ವಿಜಯ ಸಂಕಲ್ಪ ಯಾತ್ರೆ ಮಾ.11 ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿತು. ವಿಜಯ ಸಂಕಲ್ಪ ಯಾತ್ರೆಯ ಅಂಗವಾಗಿ ಸುಳ್ಯದಲ್ಲಿ ಅದ್ದೂರಿ ರೋಡ್ ಶೋ ನಡೆಯಿತು. ಸುಳ್ಯ ನಗರದ ವಿಷ್ಣು ಸರ್ಕಲ್ನಿಂದ ಜ್ಯೀತಿ ವೃತ್ತದ ವರೆಗೆ ಸುಮಾರು ಒಂದೂವರೆ ಕಿ.ಮಿ. ನಡೆದ ಅದ್ದೂರಿ ರೋಡ್ ಶೋನಲ್ಲಿ ಸಾವಿರಾರು ಮಂದಿ ಕಾರ್ಯಕರ್ತರು, ಅಭಿಮಾನಿಗಳು ಹೆದ್ದೆರೆಯಂತೆ

ಹರಿದು ಬಂದರು. ಸಿಡಿಮದ್ದಿನ ಅಬ್ಬರ, ಚೆಂಡೆ, ವಾದ್ಯ ಮೇಳಗಳ ತಾಳಗಳು, ಗೊಂಬೆಯಾಟದ ಆಕರ್ಷಣೆಯೊಂದಿಗೆ ಕಾರ್ಯಕರ್ತರ ಕಂಠದಿಂದ ಹೊರ ಹೊಮ್ಮಿದ ಮುಗಿಲು ಮುಟ್ಟಿದ ಘೋಷಣೆಗಳೊಂದಿಗೆ ಮೆರವಣಿಗೆ ಸಾಗಿ ಬಂತು. ಮೈ ಸುಡುವ ಬಿಸಿಲನ್ನೂ, ಉರಿ ಸೆಕೆಯನ್ನು ಮೀರಿದ ಉತ್ಸಾಹದಲ್ಲಿ ಕಾರ್ಯಕರ್ತರು ರೋಡ್ ಶೋದಲ್ಲಿ ಭಾಗವಹಿಸಿದರು. ಕ್ಷೇತ್ರದಾದ್ಯಂತ ಕಾರ್ಯಕರ್ತರು ಹರಿದು ಬಂದರು.
ಮೆರವಣಿಗೆಯ ಎದುರಿನಲ್ಲಿ ತಾಲೂಕು ಹಾಗು ಜಿಲ್ಲಾ ಮಟ್ಟದ ನಾಯಕರು ಅದರ ಹಿಂದೆ ಘೋಷಣೆಗಳೊಂದಿಗೆ ಬಿಜೆಪಿಯ, ಟೋಫಿ ಧರಿಸಿ ಧ್ವಜ ಬೀಸುತ್ತಾ ಸಾವಿರ ಸಾವಿರ ಕಾರ್ಯಕರ್ತರು ಹೆಜ್ಜೆ ಹಾಕಿದರು. ಮಧ್ಯೆ ಮಧ್ಯೆ, ಚೆಂಡೆ, ವಾದ್ಯ ಮೇಳಗಳು ಗೊಂಬೆಯಾಟಗಳು ಮೆರುಗು ತಂದವು. ಕಿವಿಗಪ್ಪಳಿಸಿದ ಸುಡು ಮದ್ದಿನ ಪ್ರದರ್ಶನ ಅಬ್ಬರಿಸಿತು. ಮೆರವಣಿಗೆಯ ಹಿಂದೆ ವಿಜಯ ಸಂಕಲ್ಪ ಯಾತ್ರೆಯ ರಥದಲ್ಲಿ ಬಿಜೆಪಿಯ ನಾಯಕರು, ಸಚಿವರು,ಪದಾಧಿಕಾರಿಗಳು ಕೈ ಬೀಸುತ್ತಾ ಸಾಗಿ ಬಂದರು. ಕೇಸರಿ ಸಾಗರದಂತೆ ಹರಿದು ಬಂದ ರೋಡ್ ಶೋ ಜ್ಯೋತಿ ವೃತ್ತದಲ್ಲಿ

ಸಮಾಪನಗೊಂಡಿತು. ಬಳಿಕ ವಿಜಯ ಸಂಕಲ್ಪ ಯಾತ್ರೆಯ ರಥ ಪುತ್ತೂರಿನೆಡೆಗೆ ಪ್ರಯಾಣಿಸಿತು. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸಚಿವರಾದ ಎಸ್.ಅಂಗಾರ, ವಿ.ಸುನಿಲ್ಕುಮಾರ್, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದಿರೆ, ಪ್ರಧಾನ ಕಾರ್ಯದರ್ಶಿಗಳಾದ ರಾಮ್ದಾಸ್ ಬಂಟ್ವಾಳ, ಕಸ್ತೂರಿ ಪಂಜ, ಕಾರ್ಯದರ್ಶಿ ಪೂಜಾ ಪೈ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಗುರುದತ್ ನಾಯಕ್ ಮತ್ತಿತರರು ರಥದಲ್ಲಿದ್ದರು.

ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಕಾರ್ಯದರ್ಶಿ ಮುಳಿಯ ಕೇಶವ ಭಟ್, ಜಿಲ್ಲಾ ಸಮಿತಿ ಸದಸ್ಯ ವೆಂಕಟ್ ದಂಬೆಕೋಡಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುಬೋದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ, ಯುವ ಮೋರ್ಚಾ ಮಂಡಲ ಅಧ್ಯಕ್ಷ ಶ್ರೀಕೃಷ್ಣ ಎಂ.ಆರ್,ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ, ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಎಸ್.ಎನ್.ಮನ್ಮಥ, ಎನ್.ಎ
ರಾಮಚಂದ್ರ, ಸುರೇಶ್ ಕಣೆಮರಡ್ಕ, ನವೀನ್ ಕುಮಾರ್ ಮೇನಾಲ, ಭಾಗೀರಥಿ ಮುರುಳ್ಯ, ರಾಧಾಕೃಷ್ಣ ಬೊಳ್ಳೂರು ಮತ್ತಿತರರು ಉಪಸ್ಥಿತರಿದ್ದರು.

ಮಡಿಕೇರಿಯಿಂದ ಆಗಮಿಸಿದ ಯಾತ್ರೆಗೆ ಸಚಿವ ಎಸ್.ಅಂಗಾರ ಅವರ ನೇತೃತ್ವದಲ್ಲಿ ಜಿಲ್ಲಾ ಗಡಿ ಸಂಪಾಜೆಯಲ್ಲಿ ಸ್ವಾಗತಿಸಲಾಯಿತು.ಸಂಪಾಜೆ, ಅರಂತೋಡು ಮೂಲಕ ಸಾಗಿ ಸುಳ್ಯಕ್ಕೆ ಆಗಮಿಸಿತು.
ಮಾ.11,12 ಮತ್ತು 13 ರಂದು 3 ದಿನಗಳ ಕಾಲ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದು ಎಲ್ಲಾ ಕ್ಷೇತ್ರಗಳಲ್ಲಿಯೂ ಯಾತ್ರೆ ಪ್ರಯಾಣಿಸಲಿದೆ.

