ಸುಳ್ಯ:ನಮ್ಮೆಲ್ಲರ ತೆರಿಗೆ ದುಡ್ಡಿನಿಂದ ನೀಡುವ ಗ್ಯಾರಂಟಿ ಸವಲತ್ತುಗಳನ್ನುಪಡೆಯಲು ಸರ್ವರೂ ಅರ್ಹರು.ಅದೇ ರೀತಿ
ಈ ದೇಶದಲ್ಲಿ ಎಲ್ಲಾ ಸವಲತ್ತುಗಳನ್ನು ಪಡೆಯಲು ಸರ್ವರೂ ಅರ್ಹರು. ಈ ಬಗ್ಗೆ ಶೋಕಾಸ್ ನೋಟೀಸ್, ಉಚ್ಚಾಟನೆ ಕ್ರಮಗಳಿಂದ ಗೊಂದಲದ ಗೂಡಾಗಿ ತ್ರಿಶಂಕು ಸ್ಥಿತಿಯಲ್ಲಿರುವ ಸುಳ್ಯ ಕಾಂಗ್ರೆಸ್ ಮುಖಂಡರ ಸಲಹೆ
ಬಿಜೆಪಿಗೆ ಅಗತ್ಯವಿಲ್ಲ ಎಂದು ಸುಳ್ಯ ಬಿಜೆಪಿ ಮಂಡಲ ಸಮಿತಿ ಹೇಳಿದೆ. ಮೋದಿ ಸರಕಾರದ ಹತ್ತಾರು ಯೋಜನೆಗಳನ್ನು ಈ ದೇಶದ ಸರ್ವರಿಗೂ ನೀಡಿದೆ. ಅದೇ ರೀತಿ ರಾಜ್ಯ ಸರಕಾರದ ಸವಲತ್ತುಗಳನ್ನು ಪಡೆಯಲು ಎಲ್ಲರೂ ಅರ್ಹರು. ಅಡಿಕೆ ಬೆಳೆಗೆ ಉತ್ತಮ ಗೌರವಯುತ ದರ ಬಂದಿರುವುದೇ ಕೇಂದ್ರದಲ್ಲಿ ಬಿಜೆಪಿ ಸರಕಾರದಿಂದ. ಅಡಿಕೆ ಹಳದಿ ರೋಗದ ಪರಿಹಾರಕ್ಕೆ 25 ಕೋಟಿ ಪ್ಯಾಕೇಜ್ ಮಂಜೂರು ಮಾಡಿ ಸಂಶೋಧನೆಗೆ ಅನುದಾನ ಮೀಸಲಿರಿಸಿದ್ದು ಹಿಂದಿನ ಬಿಜೆಪಿ ಸರಕಾರ. ಅದಕ್ಕಿಂತ ಮೊದಲು ಇದ್ದ ಕಾಂಗ್ರೆಸ್ ಪಾಲುದಾರಿಕೆಯ ಸಮ್ಮಿಶ್ರ ಸರಕಾರ, ಅದಕ್ಕೂ ಮೊದಲಿದ್ದ ಸಿದ್ದರಾಮಯ್ಯ ಸರಕಾರ ಅಡಿಕೆ ಹಳದಿ ರೋಗ ಪರಿಹಾರಕ್ಕೆ ಏನೂ ಮಾಡಿಲ್ಲ. ಇದೀಗ ರಾಜ್ಯದಲ್ಲಿ ಆರ್ಥಿಕ, ರಾಜಕೀಯ ಅರಾಜಕತೆ ಸೃಷ್ಟಿಯಾಗಿರುವಾಗ ನಾವು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡದೆ ಇನ್ನೇನು ಸನ್ಮಾನ ಮಾಡಬೇಕೆ ಎಂದು ಬಿಜೆಪಿ ಮಂಡಲ ಸಮಿತಿ ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದೆ.