ಸುಳ್ಯ: ಸುಳ್ಯ ಬಿಜೆಪಿ ಮಂಡಲ ಸಮಿತಿಯ ಹೊಸ ಅಧ್ಯಕ್ಷರ ನೇಮಕ ಪ್ರಕ್ರಿಯೆ ಸಮರ್ಥನೀಯವಲ್ಲ. ಮಂಡಲ ಸಮಿತಿ ಕೋರ್ ಕಮಿಟಿ ನಿರ್ಧಾರವನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಇದರಿಂದ ಸುಳ್ಯದ ಬಿಜೆಪಿ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ತೀವ್ರ ಬೇಸರ ಆಗಿದೆ. ಆದುದರಿಂದ ಇದನ್ನು ಸರಿಪಡಿಸುವ ತನಕ ಸುಳ್ಯ ಮಂಡಲ ಸಮಿತಿಯ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಸುಳ್ಯದಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು
ಸುಳ್ಯ ಬಿಜೆಪಿ ಪ್ರಮುಖರು ತಿಳಿಸಿದ್ದಾರೆ. ವೆಂಕಟ್ ವಳಲಂಬೆ ಅವರನ್ನು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಿರುವ ಹಿನ್ನಲೆಯಲ್ಲಿ ಹಾಲಿ ಇರುವ ಮಂಡಲ ಸಮಿತಿ ಹಾಗೂ ಕೋರ್ ಕಮಿಟಿಯಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು ಪ್ರಮುಖರು ಇಂದು ಸಭೆ ನಡೆಸಿದ್ದಾರೆ. ಈ ಅಸಮಾಧಾನವನ್ನು ಸರಿಪಡಿಸುವ ತನಕ ಯಾವುದೇ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಮತ್ತು ಯಾವುದೇ ಪಕ್ಷದ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಿಲ್ಲ. ಜಿಲ್ಲಾ ಪದಾಧಿಕಾರಿಗಳಾಗಿ ಆಯ್ಕೆಯಾದವರು ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ ಮತ್ತು ಜಿಲ್ಲಾ ಸಮಿತಿ ಸಭೆಯಲ್ಲಿ ಭಾಗವಹಿಸುವುದಿಲ್ಲ. ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ಕೆಲಸ ಮಾಡಲು ಮಾತ್ರ ನಿರ್ಧರಿಸಲಾಗಿದೆ.

ಇದು ವೈಯುಕ್ತಿಕವಾಗಿ ಯಾರ ವಿರುದ್ಧವೂ ಅಲ್ಲ, ಆದರೆ ಆಯ್ಕೆ ಪ್ರಕ್ರಿಯೆ ಸರಿಯಾಗಿಲ್ಲ. ಪಕ್ಷದ ಮಂಡಲ ಸಮಿತಿ, ಕೋರ್ ಕಮಿಟಿ ನಿರ್ಧಾರವನ್ನು ಕಡೆಗಣಿಸಲಾಗಿದೆ. ಇದನ್ನು ಮಾತುಕತೆ ಮಾಡಿ ಸರಿಪಡಿಸಬೇಕು ಎಂದು ಪ್ರಮುಖರು ಆಗ್ರಹಿಸಿದ್ದಾರೆ. ಈಗ ಇರುವ ಮಂಡಲ ಸಮಿತಿಯನ್ನೇ ಮುಂದುವರಿಸಬೇಕು ಎಂದು ಕೆಲವು ಕಾರ್ಯಕರ್ತರು ಹೇಳಿದ ಘಟನೆಯೂ ಸಭೆಯಲ್ಲಿ ನಡೆಯಿತು.ಅಧ್ಯಕ್ಷರ ನೇಮಕಾತಿಯಲ್ಲಿ
ಕೋರ್ ಕಮಿಟಿ ಶಿಫಾರಸ್ಸು ಮಾಡಿದವರನ್ನು ಅಧ್ಯಕ್ಷರನ್ನಾಗಿ ಮಾಡದಿರುವುದು ಸುಳ್ಯದ ಪ್ರಮುಖರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಶನಿವಾರ ರಾತ್ರಿ ಕೋರ್ ಕಮಿಟಿ ಸದಸ್ಯರು ಹಾಗೂ ಮಂಡಲ ಪ್ರಮುಖರು ಸಭೆ ನಡೆಸಿದ್ದರು. ಆ ಸಭೆಯಲ್ಲಿ ಆದ ತೀರ್ಮಾನದ ಹಿನ್ನಲೆಯಲ್ಲಿ ಇಂದು ಕ್ಷೇತ್ರದ ಬಿಜೆಪಿ ಪ್ರಮುಖರ ಸಭೆ ಬಿಜೆಪಿ ಮಂಡಲ ಸಮಿತಿ ಕಚೇರಿಯಲ್ಲಿ ಸಭೆ ನಡೆಸಿದರು. ಕ್ಷೇತ್ರದ ಪ್ರಮುಖರು, ಮಹಾ ಶಕ್ತಿ ಕೇಂದ್ರ, ಶಕ್ತಿ ಕೇಂದ್ರ ಮತ್ತಿತರ ಸಮಿತಿಗಳ ಪದಾಧಿಕಾರಿಗಳು ಸೇರಿ ಕಿಕ್ಕಿರಿದು ಜನ ಸಭೆಯಲ್ಲಿ ಭಾಗವಹಿಸಿದ್ದರು.

ಹಲವು ಮಂದಿ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಹಲವರುಅಸಮಾಧಾನ ಹೊರ ಹಾಕಿದ್ದಾರೆ. ಮಂಡಲ ಸಮಿತಿಯಲ್ಲಿ ಚರ್ಚೆ ನಡೆಸಿ ಅಧ್ಯಕ್ಷ ಸ್ಥಾನಕ್ಕೆ ವಿನಯಕುಮಾರ್ ಮುಳುಗಾಡು ಅವರ ಹೆಸರನ್ನು ಹಾಗೂ ಜಿಲ್ಲಾ ಸಮಿತಿಗೆ ವೆಂಕಟ್ ದಂಬೆಕೋಡಿ, ಮುಳಿಯ ಕೇಶವ ಭಟ್ ಹಾಗೂ ರಾಕೇಶ್ ರೈ ಕೆಡೆಂಜಿ ಅವರ ಹೆಸರನ್ನು ಕೋರ್ ಕಮಿಟಿಯಲ್ಲಿ ಅಂತಿಮಗೊಳಿಸಿ ಶಿಫಾರಸ್ಸು ಮಾಡಲಾಗಿತ್ತು. ಆದರೆ ಪಟ್ಟಿಯಲ್ಲಿ ಇಲ್ಲದ ವೆಂಕಟ್ ವಳಲಂಬೆಯವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು, ಮತ್ತು ಜಿಲ್ಲಾ ಸಮಿತಿ ನೇಮಕಾತಿಯನ್ನು ಬದಲಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿಗಳಾದ ಸುಬೋದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ, ಮುಖಂಡರಾದ ಎಸ್.ಎನ್.ಮನ್ಮಥ, ಎ.ವಿ.ತೀರ್ಥರಾಮ, ವೆಂಕಟ್ ದಂಬೆಕೋಡಿ, ಕೃಷ್ಣ ಶೆಟ್ಟಿ ಕಡಬ, ಮುಳಿಯ ಕೇಶವ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಮುಖರು ಭಾಗವಹಿಸಿದ್ದರು.
ಭಾವುಕರಾಗಿ ಕಣ್ಣೀರು ಸುರಿಸಿದ ಕಂಜಿಪಿಲಿ, ರಾಕೇಶ್ ರೈ ಕೆಡೆಂಜಿ:
ಪಕ್ಷದಲ್ಲಿ ಉಂಟಾದ ಅಸಮಾಧಾನ ಹಾಗೂ ಗೊಂದಲದ ಹಿನ್ನಲೆಯಲ್ಲಿ ಬೇಸರ ವ್ಯಕ್ತಪಡಿಸಿದ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹಾಗೂ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ತಮ್ಮ ಮಾತಿನ ಮಧ್ಯೆ ಭಾವುಕರಾಗಿ ಕಣ್ಣೀರು ಸುರಿಸಿದ ಘಟನೆಯೂ ನಡೆಯಿತು.









