ಸುಳ್ಯ:ಮಳೆಯಿಂದಾಗಿ ಕೆಟ್ಟು ಹೋಗಿರುವ ರಾಜ್ಯದ ರಸ್ತೆಗಳ ಗುಂಡಿ ಮುಚ್ಚಲು ಕೂಡ ಸರಕಾರ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಸುಳ್ಯ ಮಂಡಲ ಸಮಿತಿ ವತಿಯಿಂದ ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯ ಕಾಣಿಯೂರಿನಲ್ಲಿ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡಂಜಿ, ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ, ರಾಜ್ಯ ಸರ್ಕಾರವು ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದ್ದು, ಹದಗೆಟ್ಟ ರಸ್ತೆಯ ಗುಂಡಿ ಮುಚ್ಚಲೂ ಅನುದಾನ ನೀಡುತ್ತಿಲ್ಲ. ಆಶ್ವಾಸನೆ ನೀಡಿರುವ ಗ್ಯಾರಂಟಿಗಳನ್ನು ಕೂಡ ಸರಿಯಾಗಿ ನೀಡದೆ, ಎಲ್ಲಾ ರಂಗಗಳಲ್ಲಿಯೂ ವಿಫಲವಾಗಿದೆ ಎಂದು ದೂರಿದರು.ಹೊಸ ರಸ್ತೆ, ಸೇತುವೆಗಳ ಅಭಿವೃದ್ಧಿಯನ್ನು ಮಾಡುವುದು ಕನಸಿನ ಮಾತಾಗಿದೆ, ಮಳೆಯಿಂದಾಗಿ ಹದಗೆಟ್ಟಿರುವ ರಸ್ತೆಗಳ ಗುಂಡಿ ಮುಚ್ಚಲು ಕೂಡ ಸರಕಾರವು ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಅವರು ಆರೋಪಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ ಸ್ವಾಗತಿಸಿ ನಿರೂಪಿಸಿದರು, ಮಂಡಲ ಕಾರ್ಯದರ್ಶಿ ಗಣೇಶ್ ಉದನಡ್ಕ ವಂದಿಸಿದರು





