ಸುಳ್ಯ: ಹಲವು ಮಂದಿ ತಮ್ಮ ಪ್ರಯತ್ನದ ಮೂಲಕ ಸರಕಾರದಿಂದ ಅನುದಾನ ತಂದು ರಸ್ತೆ ನಿರ್ಮಾಣ ಮಾಡಿದ್ದು ಇದೆ. ಆದರೆ ಭಿಕ್ಷಾಟನೆ ಮಾಡಿ ರಸ್ತೆ ನಿರ್ಮಾಣ ಮಾಡಿದ ಇತಿಹಾಸ ಎಲ್ಲಿಯೂ ಇಲ್ಲಾ. ಭಿಕ್ಷಾಟನೆ ಮಾಡಿ ರಸ್ತೆ ನಿರ್ಮಾಣ ಮಾಡಿದರೆ ಸುಳ್ಯದಲ್ಲಿ ಹೊಸ ಇತಿಹಾಸ ನಿರ್ಮಾಣ ಆಗಲಿದೆ, ಸರಕಾರಕ್ಕೆ ಹಣವೂ ಉಳಿಯಲಿದೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಸುಳ್ಯ- ಕೊಡಿಯಾಲಬೈಲು, ದುಗ್ಗಲಡ್ಕ ರಸ್ತೆ ಅಭಿವೃದ್ಧಿಗೆ ಸಚಿವ ಎಸ್.ಅಂಗಾರ ಅವರು ಸಾಕಷ್ಟು
ಅನುದಾನ ನೀಡಿದ್ದಾರೆ. 50 ಲಕ್ಷದ ಅನುದಾನದಲ್ಲಿ ರಸ್ತೆ ಕಾಂಕ್ರಿಟೀಕರಣ ಆಗಿದೆ. ಉಳಿದ ಭಾಗದ ರಸ್ತೆಯೂ ಅಭಿವೃದ್ಧಿ ಮಾಡುವ ಪ್ರಯತ್ನದಲ್ಲಿದ್ದೇವೆ. ಸರಕಾರದ ಪ್ರಕ್ರಿಯೆಯಲ್ಲಿ ಕೆಲವೊಮ್ಮೆ ವಿಳಂಬ ಆಗುವುದು ಸಹಜ ಎಂದು ಹೇಳಿದರು. ಈ ಬಗ್ಗೆ ಈಗ ನಡೆಯುತ್ತಿರುವ ಪ್ರಚಾರಗಳು ರಾಜಕೀಯ ಪ್ರೇರಿತ ಎಂದು ಅವರು ಹೇಳಿದ್ದಾರೆ.
ಅರಂತೋಡು ಅಡ್ತಲೆ ರಸ್ತಗೆ ಬಿಡುಗಡೆ ಆದ ಎರಡು ಕೋಟಿ ಅನುದಾನದ ಕಾಮಗಾರಿ ಕೂಡಲೇ ನಡೆಯಲಿದೆ. ಉಳಿದ ರಸ್ತೆಯ ಅಭಿವೃದ್ಧಿಯೂ ಮಾಡಲಾಗುವುದು. ಅಡ್ತಲೆಯ ನಾಗರಿಕ ಹಿತರಕ್ಷಣಾ ವೇದಿಕೆ ಹಾಗು ಸಾರ್ವಜನಿಕರ ಜೊತೆ ಮಾತನಾಡಲಾಗಿದೆ. ರಸ್ತೆ ಅಭಿವೃದ್ಧಿ ಆಗಲಿದ್ದು ಅವರು ನೋಟಾ ಅಭಿಯಾನದಿಂದ ಹಿಂದೆ ಸರಿಯಲಿದ್ದಾರೆ ಎಂದು ಕಂಜಿಪಿಲಿ ಹೇಳಿದರು.
ಕೆಆರ್ಡಿಎಲ್ ಮೂಲಕ ಅನುದಾನ-ಅಂಗಾರ:
ದುಗ್ಗಲಡ್ಕ ರಸ್ತೆಗೆ 50 ಲಕ್ಷ ಅನುದಾನದಲ್ಲಿ ಕಾಂಕ್ರೀಟೀಕರಣ ಆಗಿದೆ. 25 ಲಕ್ಷ ಅನುದಾನ ಬಿಡುಗಡೆ ಆಗಿದೆ ಅಲ್ಲದೆ ಕೆಆರ್ಡಿಎಲ್ ಮೂಲಕ ರಸ್ತೆಗೆ ಅನುದಾನ ಒದಗಿಸುವ ಪ್ರಯತ್ನ ನಡೆಯುತಿದೆ ಎಂದು ಸಚಿವ ಎಸ್.ಅಂಗಾರ ಹೇಳಿದ್ದಾರೆ. ಕೋಲ್ಚಾರ್ ರಸ್ತೆ ಅಭಿವೃದ್ಧಿ ಕಳಪೆ ಆಗಿದೆ ಎಂಬ ದೂರು ಗಮನಕ್ಕೆ ಬಂದ ಕೂಡಲೇ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.1994 ರ ಮೊದಲು ಸುಳ್ಯ ತಾಲೂಕು ಹೇಗಿತ್ತು ಮತ್ತು ಬಳಿಕ ಹೇಗೆ ಅಭಿವೃದ್ಧಿ ಆಗಿದೆ ಎಂಬುದನ್ನು ಜನರು ತುಲನೆ ಮಾಡಬೇಕು ಎಂದ ಅವರು ಕಾಂಗ್ರೆಸ್ನವರು ಗೊಂದಲ ಸೃಷ್ಟಿಸಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯೆ ಭಾಗೀರಥಿ ಮುರುಳ್ಯ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಸಮಿತಿ ಸದಸ್ಯ ವೆಂಕಟ್ ದಂಬೆಕೋಡಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುಬೋದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ, ಯುವಮೋರ್ಚಾ ಗುರುದತ್ ನಾಯಕ್, ಯುವ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ, ನಗರ ಪಂಚಾಯತ್ ಅಧ್ಯಕ್ಷ ವಿಜಯಕುಮಾರ್ ಕಂದಡ್ಕ ಮತ್ತಿತರರು ಉಪಸ್ಥಿತರಿದ್ದರು.