

ಸುಳ್ಯ: ಸುಳ್ಯ ನಗರ ಪಂಚಾಯತ್ನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದು ಅಭೂತಪೂರ್ವ ಬದಲಾವಣೆ ಆಗಿದೆ. ನಗರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಿಂದ ಕಾಂಗ್ರೆಸ್ ಸದಸ್ಯರು ನಗರ ಪಂಚಾಯತ್ ಸಭೆಗೆ ಅಡ್ಡಿಪಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿದ್ದಾರೆ. ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಚಿವರು ಸಭೆಗೆ ಬರುವುದಿಲ್ಲ ಎಂದು ಕಪ್ಪು ಪಟ್ಟಿ ಧರಿಸಿ ಸಭೆಗೆ
ಬರುವುದು, ಪದೇ ಪದೇ ಪ್ರತಿಭಟನೆಯ ನಾಟಕ ಮಾಡಿ ಸಭೆಗೆ ಅಡ್ಡಿ ಪಡಿಸುವ ಕಾಂಗ್ರೆಸ್ನವರು ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲಾ ಎಂಬುದನ್ನು ಸಾಬೀತುಪಡಿಸಿದ್ದಾರೆ. ಮೊನ್ನೆ ನಡೆದ ಸಭೆಯಲ್ಲಿಯೂ ಸಭೆಗೆ ಅಡ್ಡಿ ಪಡಿಸುವಾಗ ಅಡಳಿತ ವಿರೋಧ ಪಕ್ಷದ ಸದಸ್ಯರ ಮಧ್ಯೆ ತಳ್ಳಾಟ ಆಗಿದ್ದು ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ನಡೆದಿದೆ ಅಸ್ಟೇ ಎಂದು ಹೇಳಿದರು. ಸಭೆಗೆ ಅಡ್ಡಿ ಪಡಿಸುವ ಕಾಂಗ್ರೆಸ್ ಸದಸ್ಯರ ವರ್ತನೆಯನ್ನು ಖಂಡಿಸುವುದಾಗಿ ಕಂಜಿಪಿಲಿ ಹೇಳಿದರು.ಸುಳ್ಯ ನಗರ ಪಂಚಾಯತ್ ವತಿಯಿಂದ ಉತ್ತಮ ಕೆಲಸಗಳು ಆಗುತಿದೆ. ಕಸ ವಿಲೇವಾರಿಗೆ ಬರ್ನಿಂಗ್ ಮೆಷಿನ್ ಅಳವಡಿಸಲಾಗಿದೆ. ಗ್ಯಾಸಿಫಿಕೇಷನ್ ಮೂಲಕ ಕಸ ಉರಿಸುವ ವ್ಯವಸ್ಥೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಆಗುತಿದೆ. ಕುಡಿಯುವ ನೀರಿನ ಶಾಶ್ವತ ವ್ಯವಸ್ಥೆಗೆ ವೆಂಟೆಡ್ ಡ್ಯಾಂ ಮತ್ತಿತರ ಕಾಮಾಗಾರಿಗಳಿಗೆ 17 ಕೋಟಿ ಅನುದಾನ ಮಂಜೂರಾಗಿದೆ. ಎರಡು ಕೋಟಿ ವೆಚ್ಚದಲ್ಲಿ ಜಾಕ್ವೆಲ್ ಕಾಮಗಾರಿ ನಡೆಸಲಾಗುತಿದೆ ಎಂದು ಅವರು ಹೇಳಿದರು. ಚುನಾಚಣೆಯಲ್ಲಿ ಗೆದ್ದ ಸದಸ್ಯರು, ನಾಮನಿರ್ದೇಶಿತ ಸದಸ್ಯರು ಎಂಬ ಭೇದ ಭಾವ ಇಲ್ಲ. ನಗರ ಪಂಚಾಯತ್ನಲ್ಲಿ ಸದಸ್ಯರು ಎಲ್ಲರೂ ಒಂದೇ ಎಂದು ಕಂಜಿಪಿಲಿ ಹೇಳಿದರು.

ನಗರ ಪಂಚಾಯತ್ ನಾಮ ನಿರ್ದೇಶಿತ ಸದಸ್ಯ ಬೂಡು ರಾಧಾಕೃಷ್ಣ ರೈ ಮಾತನಾಡಿ ‘ ಪ್ರತಿ ಬಾರಿ ಸಭೆಗೆ ಕಾಂಗ್ರೆಸ್ ಸದಸ್ಯರು ಅಡ್ಡಿ ಪಡಿಸುತ್ತಿದ್ದರು. ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿ ಸಭೆಗೆ ಅಡ್ಡಿ ಪಡಿಸುವವರನ್ನು ಸಭೆಯಿಂದ ಹೊರಗೆ ಕಳಿಸಿ ಎಂದು ಅಧ್ಯಕ್ಷರಿಗೆ ಹೇಳಿದ್ದೇವೆ. ಆ ಸಂದರ್ಭದಲ್ಲಿ ಅವರು ನಮ್ಮ ಮೇಲೆಯೇ ಎರಗಿ ಬಂದು ತಳ್ಳಾಟ ಆಗಿದೆ ಎಂದು ಹೇಳಿದರು. ನಗರ ಪಂಚಾಯತ್ ಆಡಳಿತವನ್ನು, ಸರಕಾರವನ್ನು ಬೈಯ್ಯುವ ನೈತಿಕತೆ ಕಾಂಗ್ರೆಸ್ನವರಿಗೆ ಇಲ್ಲಾ ಎಂದು ಹೇಳಿದ ಬೂಡು ರಾಧಾಕೃಷ್ಣ ರೈ ಶಾಂತ ರೀತಿಯಲ್ಲಿ ಕ್ರಿಯಾತ್ಮಕವಾಗಿ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಯಲಿ. ಆಲ್ಲದೆ ಕಾಂಗ್ರೆಸ್ನವರ ರಾಜಕೀಯ ನಾಟಕಕ್ಕೆ ಸಭೆಯಲ್ಲಿ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಮದ್ಯದ ಅಂಗಡಿ ತೆರೆದಿರುವುದಕ್ಕೆ ವಿರೋಧ-ಕಂಜಿಪಿಲಿ:
ಹರಿಹರ ಮತ್ತು ಕೊಲ್ಲಮೊಗ್ರದಲ್ಲಿ ಏಕಾ ಏಕಿ ಮದ್ಯದ ಅಂಗಡಿಗಳನ್ನು ತೆರೆದಿರುವುದನ್ನು ಬಿಜೆಪಿ ವಿರೋಧಿಸುತ್ತದೆ. ಮದ್ಯದಂಗಡಿಗಳನ್ನು ಸ್ಥಳಾಂತರ ಮಾಡಲು ಇರುವ ಅವಕಾಶವನ್ನು ಬಳಸಿಕೊಂಡು ಬೇರೆಡೆಯಿಂದ ಸ್ಥಳಾಂತರಗೊಂಡು ಅಲ್ಲಲ್ಲಿ ಮದ್ಯದಂಗಡಿಗಳನ್ನು ತೆರೆಯಲಾಗುತಿದೆ. ಅಲ್ಲಿನ ಜನರ ಭಾವನೆಯನ್ನು ಪರಿಗಣಿಸಿ ಹರಿಹರ ಮತ್ತು ಕೊಲ್ಲಮೊಗ್ರದಲ್ಲಿನ ಮದ್ಯದಂಗಡಿಗಳನ್ನು ಮುಚ್ಚಬೇಕೆಂದು ಅಬಕಾರಿ ಸಚಿವರಿಗೆ ಪಕ್ಷದ ವತಿಯಿಂದ ಬೇಡಿಕೆ ಸಲ್ಲಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಿಎ ಬ್ಯಾಂಕ್ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ, ಉಪಾಧ್ಯಕ್ಷ ಶೀನಪ್ಪ ಬಯಂಬು, ಬಿಜೆಪಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಜಿನ್ನಪ್ಪ ಪೂಜಾರಿ, ನ.ಪಂ. ನಾಮನಿರ್ದೇಶಿತ ಸದಸ್ಯ ರೋಹಿತ್ ಕೊಯಿಂಗೋಡಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮಹೇಶ್ ಕುಮಾರ್ ಮೇನಾಲ, ಸೋಮನಾಥ ಪೂಜಾರಿ, ವಿಜಯ ಆಲಡ್ಕ ಉಪಸ್ಥಿತರಿದ್ದರು.