ಸುಳ್ಯ: ಸರಕಾರ ಅಲ್ಪ ಸಂಖ್ಯಾತರನ್ನು ಕಡೆಗಣಿಸಿ ಅವರ ಹಕ್ಕನ್ನು ಕಸಿದುಕೊಳ್ಳಲಾಗುತಿದೆ ಎಂಬ ಕಾಂಗ್ರೆಸ್ ಹಾಗು ಅಲ್ಪ ಅಸಂಖ್ಯಾತ ಮುಖಂಡರ ಆರೋಪ ಸತ್ಯಕ್ಕೆ ದೂರವಾದುದು ಎಂದು ಸುಳ್ಯ ಬಿಜೆಪಿ ಮಂಡಲ ಸಮಿತಿ ಹೇಳಿದೆ. ಸುಳ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ‘ಮುಸ್ಲಿಮರು ಎಂಬ ಕಾರಣಕ್ಕೆ ಸವಣೂರಿನಲ್ಲಿ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಿಕೆ ನೀಡಿ ಘಟನೆಯನ್ನು ತಿರುಚಿ ಅದರಿಂದ ರಾಜಕೀಯ ಲಾಭ
ಪಡೆಯುವ ಪ್ರಯತ್ನವನ್ನು ಕಾಂಗ್ರೆಸ್ ಮತ್ತು ಅಲ್ಪ ಸಂಖ್ಯಾತ ಮುಖಂಡರು ನಡೆಸುತ್ತಿದ್ದಾರೆ. ಘಟನೆಯ ಸತ್ಯಾಸತ್ಯತೆಯನ್ನು ಅರಿತು ಮುಖಂಡರು, ಸಂಘಟನೆಗಳು ಹೇಳಿಕೆ ನೀಡಬೇಕು ಎಂದು ಅವರು ಹೇಳಿದರು.ಸರಕಾರ ಎಲ್ಲರನ್ನೂ ಸಮಾನಾಗಿ ಕಾಣುತಿದೆ. ಯಾರನ್ನೂ ಕಡೆಗಣಿಸುವುದಾಗಲೀ, ತಾರತಮ್ಯ ಮಾಡುವುದಾಗಲೀ ಮಾಡುವುದಿಲ್ಲ. ಆದರೆ ವ್ಯಾಪಾರಿಗಳ ಸೋಗಿನಲ್ಲಿ ಬಂದು ಮಹಿಳೆಯ ಮೇಲೆ ದೌರ್ಜನ್ಯ ನಡೆಸಿರುವುದು ಖಂಡನೀಯ. ಇಂತಹಾ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಲಿದೆ. ಯಾರೇ ಆದರೂ ತಪ್ಪಿತಸ್ಥರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಸವಣೂರಿನ ಘಟನೆಯ ಬಗ್ಗೆ ಎರಡೂ ಕಡೆಯವರ ವಿರುದ್ಧ ಕೇಸು ದಾಖಲಾಗಿದ್ದು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಎಂದು ಅವರು ಹೇಳಿದರು.

ಬಿಜೆಪಿ ವತಿಯಿಂದ ಕೋಟಿ ಕಂಠ ಗಾಯನ:
ಅ.28 ರಂದು ಎಲ್ಲೆಡೆ ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆಯಲಿದೆ. ಬಿಜೆಪಿ ಮಂಡಲ ಸಮಿತಿ ವತಿಯಿಂದ ಸುಳ್ಯ ಬಿಜೆಪಿ ಕಚೇರಿ ಹಾಗು ಕಡಬದಲ್ಲಿ ಕೋಟಿ ಕಂಠ ಗಾಯನ ನಡೆಯಲಿದೆ ಎಂದು ಹರೀಶ್ ಕಂಜಿಪಿಲಿ ಹೇಳಿದರು.
ನ.1ಮತ್ತು 2ರಂದು ಸುಳ್ಯದಲ್ಲಿ ಮೃತ್ತಿಕೆ ಅಭಿಯಾನ:
ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇ ಗೌಡ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮ ನ.11 ರಂದು ನಡೆಯಲಿದೆ. ಈ ಹಿನ್ನಲೆಯಲ್ಲಿ ಪವಿತ್ರ ಮೃತ್ತಿಕೆ ಅಭಿಯಾನ ನಡೆಯುತಿದೆ. ನ.1 ಮತ್ತು 2 ರಂದು ಮೃತ್ತಿಕೆ ಅಭಿಯಾನ ಸುಳ್ಯ ತಾಲೂಕಿನಲ್ಲಿ ನಡೆಯಲಿದೆ. ಪಂಜ, ಬೆಳ್ಳಾರೆ, ಸುಳ್ಯ, ಉಬರಡ್ಕ ಮಿತ್ತೂರು, ಸಂಪಾಜೆ, ಕನಕಮಜಲಿನಲ್ಲಿ ಮೃತ್ತಿಕೆ ಸಂಗ್ರಹ ಅಭಿಯಾನ ನಡೆಯಲಿದೆ. ಕಾರ್ಯಕ್ರಮದ ಯಶಸ್ವಿಗೆ ಜನರು ಸಹಕಾರ ನೀಡಬೇಕು ಎಂದು ಹರೀಶ್ ಕಂಜಿಪಿಲಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ರೈಲ್ವೇ ಸಲಹಾ ಮಂಡಳಿ ಸದಸ್ಯ ವೆಂಕಟ್ ದಂಬೆಕೋಡಿ, ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಬಿಜೆಪಿ ಮಂಡಲ ಪ್ತಧಾನ ಕಾರ್ಯದರ್ಶಿಗಳಾದ ಸುಬೋದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ, ಬಿಜೆಪಿ ಯುವ ಮೋರ್ಚಾ ಪ್ತಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ, ಗುತ್ತಿಗಾರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿನಯಕುಮಾರ್ ಮುಳುಗಾಡು ಉಪಸ್ಥಿತರಿದ್ದರು.