ಸುಳ್ಯ:ಪಕ್ಷದ ಪ್ರಮುಖರು, ಹಿರಿಯರು ವಿಶ್ವಾಸವಿರಿಸಿ ಮಂಡಲ ಸಮಿತಿ ಅಧ್ಯಕ್ಷ ಸ್ಥಾನವನ್ನು ನೀಡಿದ್ದಾರೆ. ಪಕ್ಷ ಇರಿಸಿದ ವಿಶ್ವಾಸಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಸಮರ್ಥವಾಗಿ ನಿಭಾಯಿಸಿ ಪಕ್ಷವನ್ನು ಮುನ್ನಡೆಸಿ ಬಿಜೆಪಿಯನ್ನು ಇನ್ನಷ್ಟು ಬಲಿಷ್ಠವಾಗಿ ಬೆಳೆಸಲಾಗುವುದು ಎಂದು ಬಿಜೆಪಿ ಮಂಡಲ ಸಮಿತಿ ನೂತನ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದ್ದಾರೆ. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ‘ಸುಳ್ಯ ಮಿರರ್’ ಜೊತೆ ಮಾತನಾಡಿದ ಅವರು ಕ್ಷೇತ್ರದ 76 ಗ್ರಾಮಗಳಲ್ಲಿ
ಪಕ್ಷವನ್ನು ಇನ್ನಷ್ಟು ಬಲಿಷ್ಠವಾಗಿ ಬೆಳೆಸಲಾಗುವುದು. ಕ್ಷೇತ್ರದ ಶಾಸಕರ ಜೊತೆ ಸೇರಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪ್ರಯತ್ನ ನಡೆಸಲಾಗುವುದು ಮತ್ತು ಪಕ್ಷವನ್ನು ಗಟ್ಟಿಯಾಗಿ ಕಟ್ಟಲಾಗುವುದು.
ಪಕ್ಷದಲ್ಲಿನ ಹಿರಿಯರನ್ನು ಗೌರವಿಸಿ ಹೊಸ ಯುವಕರಿಗೆ ಅವಕಾಶ ನೀಡಲಾಗುವುದು. ಪಕ್ಷದಲ್ಲಿ ಕೆಲಸ ಮಾಡುವ ಯುವಕರನ್ನು ಪಕ್ಷದಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಲು ಪ್ರೇರಣೆ ನೀಡಲಾಗುವುದು ಮತ್ತು ಸೂಕ್ತ ಸ್ಥಾನ ಮಾನಗಳನ್ನು ನೀಡಲಾಗುವುದು. ಬಿಜೆಪಿಗೆ ಕಾರ್ಯಕರ್ತರೇ ಜೀವಾಳ, ತನಗೆ ಎರಡನೇ ಬಾರಿಗೆ ಮಂಡಲ ಸಮಿತಿ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ಕಾರ್ಯಕರ್ತರಿಗೆ ಸಿಕ್ಕಿದ ಗೌರವ ಎಂದು ವೆಂಕಟ್ ವಳಲಂಬೆ ಹೇಳಿದ್ದಾರೆ.
ಈ ಹಿಂದೆ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರಾಗಿ ನಾಲ್ಕು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದ ವೆಂಕಟ್ ವಳಲಂಬೆ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿದ್ದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು ಸೇರಿ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. ಸಂಘ ಪರಿವಾರ ಸಂಘಟನೆಗಳ ಲ್ಲಿಯೂ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.









