ಮಂಗಳೂರು: ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನಪರ ಯೋಜನೆಗಳ ಮಾಹಿತಿಯನ್ನು ದ.ಕ. ಜಿಲ್ಲೆಯ ಜನರಿಗೆ ತಿಳಿಸಲು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗುರುದತ್ ನಾಯಕ್ ನೇತೃತ್ವದಲ್ಲಿ
ಜಿಲ್ಲಾದ್ಯಂತ ಸಂಚರಿಸಲಿರುವ ಬಿಜೆಪಿಯ ‘ಪ್ರಗತಿ ರಥ’ ಯಾತ್ರೆಗೆ ಮಂಗಳೂರಿನಲ್ಲಿ ಸೋಮವಾರ ಬೆಳಗ್ಗೆ ಚಾಲನೆ ನೀಡಲಾಯಿತು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ಪ್ರಗತಿ ರಥ ಯಾತ್ರೆಗೆ ಚಾಲನೆ
ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಗತಿ ರಥ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪ್ರತಿ ಗ್ರಾಮಗಳ ಪ್ರತಿಯೊಂದು ಬೂತ್ಗೆ ಸಂಚರಿಸಲಿದೆ. ಚುನಾವಣೆ ಘೋಷಣೆ ಆಗುವ ತನಕ ಈ ರಥ ಜಿಲ್ಲಾದ್ಯಂತ ಸಂಚರಿಸಲಿದ್ದು, ಕೇಂದ್ರ, ರಾಜ್ಯ ಸರಕಾರದ ಜನಪರ ಯೋಜನೆಯ, ಸಾಧನೆಯನ್ನು ಜನರ ಮನೆಮನಗಳಿಗೆ ತಿಳಿಸಲಿದೆ.ಇದರ ಜೊತೆಗೆ ಜನರ ನಾಡಿಮಿಡಿತವನ್ನು ಅರಿತುಕೊಂಡು, ಬಿಜೆಪಿಯ ಚುನಾವಣೆಯ ಪ್ರಣಾಳಿಕೆಯಲ್ಲಿ ಏನನ್ನು ಸೇರಿಸಬೇಕು ಎಂಬ ಅಭಿಪ್ರಾಯವನ್ನು ಜನರಿಂದ ಪಡೆಯಲಾಗುವುದು ಎಂದು ಮಾಹಿತಿ ನೀಡಿದರು.

ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ, ಪ್ರಗತಿ ರಥ ಯಾತ್ರೆಯ ಸಂದರ್ಭದಲ್ಲಿ ಕೇವಲ ಡಬಲ್ ಇಂಜಿನ್ ಸರಕಾರದ ಸಾಧನೆಯನ್ನು ಜನರಿಗೆ ತಿಳಿಸುವುದು ಮಾತ್ರವಲ್ಲದೆ, ಪ್ರತಿ ಬೂತ್ನಲ್ಲಿ ಸೇರುವ ಜನರಿಂದ ಸಲಹೆ, ಅವರ ಅಭಿಪ್ರಾಯವನ್ನು ಪಡೆದುಕೊಂಡು ಪ್ರಣಾಳಿಕೆಯಲ್ಲಿ ಸೇರಿಸಲು ಪಕ್ಷದ ರಾಜ್ಯಾಧ್ಯಕ್ಷರಿಗೆ ತಿಳಿಸಲಾಗುವುದುಎಂದು ಹೇಳಿದರು. ಮನಪಾ ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ ಪ್ರಗತಿ ರಥದ ರಾಜ್ಯದ ಸಹ ಸಂಚಾಲಕ ಪ್ರೇಮಾನಂದ ಶೆಟ್ಟಿ, ಧುರೀಣರಾದ ವಿಜಯ ಕುಮಾರ್ ಶೆಟ್ಟಿ, ಸುದೀಪ್ ಶೆಟ್ಟಿ, ಈಶ್ವರ ಕಟೀಲ್ ಮತ್ತಿತರರು ಉಪಸ್ಥಿತರಿದ್ದರು.

‘ಎಲ್ಲಾ ವಿಧಾನ ಸಭಾ ಕ್ಷೇತ್ರದಲ್ಲಿ ಒಂದೊಂದು ರಥಯಾತ್ರೆ ತೆರಳಲಿದೆ. ಪ್ರತಿ ಹಳ್ಳಿ, ಬೂತ್ಗಳಿಗೆ ತೆರಳಿ ಕೇಂದ್ರ, ರಾಜ್ಯ ಸರಕಾರದ ಸವಲತ್ತುಗಳು ಮತ್ತು ಸಾಧನೆಗಳನ್ನು ಜನರಿಗೆ ತಿಳಿಸಲಾಗುವುದು.ವೀಡಿಯೋ ಪ್ರದರ್ಶನದ ಮೂಲಕ ಮಾಹಿತಿ ನೀಡಲಾಗುವುದು’
-ಗುರುದತ್ ನಾಯಕ್
ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ.