ಸುಳ್ಯ:ಲೋಕ ಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೆ ಸುಳ್ಯ ವಿಧಾನಸಭಾ ಕ್ಷೇತ್ರದಿಂದ 60ರಿಂದ 70 ಸಾವಿರ ಮತಗಳ ಅಂತರದ ಬಹುಮತ ನಿರೀಕ್ಷೆ ಮಾಡುತ್ತಿದ್ದೇವೆ. ಈ ಬಹುಮತ ಪಡೆಯಲು ಎಲ್ಲಾ ಮುಖಂಡರು, ಕಾರ್ಯಕರ್ತರು ಪ್ರಯತ್ನ ನಡೆಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ. ಸುಳ್ಯ ಬಿಜೆಪಿ ಮಂಡಲ ಕಾರ್ಯನಿರ್ವಹಣಾ ತಂಡದ ಸಭೆಯಲ್ಲಿ ಅವರು ಮಾತನಾಡಿದರು. ಸುಳ್ಯದಿಂದ ಮಾತ್ರ ದೇಶಕ್ಕೆ ಉತ್ತಮ ಸಂದೇಶ
ಕೊಡಲು ಸಾಧ್ಯ. ಯಾವುದೇ ಅಸಮಾಧಾನ, ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇದ್ದರೂ ಅದನ್ನು ಬದಿಗಿರಿಸಿ ನಗುಮುಖದಿಂದ ಕಾರ್ಯ ನಿರ್ವಹಿಸಿ ಎಂದು ಅವರು ಕರೆ ನೀಡಿದರು. ಲೋಕಸಭಾ ಚುನಾವಣಾ ಸಿದ್ಧತೆಯ ಹಿನ್ನಲೆಯಲ್ಲಿ ಪಕ್ಷದ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಗ್ರಾಮ ಚಲೋ ಕಾರ್ಯಕಮ, ಗೋಡೆ ಬರಹ, ಕೇಂದ್ರ ಸರಕಾರದ ಯೋಜನೆ ಮನೆ ಮನೆಗೆ ತಲುಪಿಸುವ ಕೆಲಸಗಳನ್ನು ಈ ಬಾರಿ ಬಿಜೆಪಿ ಹಮ್ಮಿಕೊಂಡಿದ್ದು ಅದು ಇನ್ನೂ ಸುಳ್ಯ ಕ್ಷೇತ್ರದಲ್ಲಿ ಆರಂಭಗೊಂಡಿಲ್ಲ. ಆ ಕಾರ್ಯಕ್ರಮಗಳನ್ನು ಇಂದಿನಿಂದಲೇ ಆರಂಭಿಸಬೇಕು. ಎಲ್ಲರೂ ಒಟ್ಟಾಗಿ ಪಕ್ಷ ಸಂಘಟನೆಯಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಚ ಹರೀಶ್ ಕಂಜಿಪಿಲಿ ಅಧ್ಯಕ್ಷತೆ ವಹಿಸಿದ್ದರು.ಮಂಡಲ ಸಮಿತಿ ನಿಯೋಜಿತ ಅಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಬೊಟ್ಯಾಡಿ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಎ.ವಿ.ತೀರ್ಥರಾಮ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ, ರಾಕೇಶ್ ರೈ ಕೆಡೆಂಜಿ, ಜಿಲ್ಲಾ ಕಾರ್ಯದರ್ಶಿ ವಿನಯ ಮುಳುಗಾಡು, ಜಿಲ್ಲಾ ಎಸ್.ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪೂವಪ್ಪ ನಾಯ್ಕ್ ವೇದಿಕೆಯಲ್ಲಿ ಇದ್ದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ ಸ್ವಾಗತಿಸಿದರು. ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.
ಮುಖಂಡರಾದ ಎಸ್.ಎನ್.ಮನ್ಮಥ, ವೆಂಕಟ್ ದಂಬೆಕೋಡಿ, ಆಶಾ ತಿಮ್ಮಪ್ಪ ಮತ್ತಿತರರು ಉಪಸ್ಥಿತರಿದ್ದರು.