ಬೆಳ್ಳಾರೆ: ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆಯು ಪೆರುವಾಜೆಯ ಜೆ.ಡಿ ಆಡಿಟೋರಿಯಂನಲ್ಲಿ ಜೂ.16ರಂದು ನಡೆಯಿತು.ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಿಜೆಪಿ ಜಗತ್ತಿನ ಅತೀ ದೊಡ್ಡ ಪಕ್ಷವಾಗಿ ಬೆಳೆಯಲು ಹಿರಿಯರ ಬಲಿದಾನ ಮತ್ತು ಅರ್ಪಣಾ ಮನೋಭಾವ ಕಾರಣ ಎಂದು ಅವರು ಹೇಳಿದರು. ಶಾಸಕ ಸ್ಥಾನಕ್ಕೆ
ಆಭ್ಯರ್ಥಿಯಾಗಿ ನನನ್ನು ಪಕ್ಷ ಆಯ್ಕೆ ಮಾಡಿ, ಕಾರ್ಯಕರ್ತರ ಪರಿಶ್ರಮದಿಂದ ಶಾಸಕಿಯಾಗಿ ಆಯ್ಕೆಯಾಗಿದ್ದೇನೆ. ಇದಕ್ಕಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಶಾಸಕಿಯಾಗಿ ಜನರಿಗೆ ನ್ಯಾಯ ಸಲ್ಲಿಸುತ್ತೇನೆ ಜೊತೆಗೆ ಪಕ್ಷಕ್ಕೆ ಗೌರವ ತರುವ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದರು. ಅಭಿವೃದ್ಧಿ ವಿಚಾರದಲ್ಲಿ ಎಲ್ಲರ ಸಹಕಾರ ಬೇಕು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ವಹಿಸಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ರಾಮದಾಸ್ ಬಂಟ್ವಾಳ, ಜಿಲ್ಲಾ ಉಪಾಧ್ಯಕ್ಷರಾದ ಬೂಡಿಯಾರು ರಾಧಾಕೃಷ್ಣ ರೈ, ವೆಂಕಟ್ ವಳಲಂಬೆ, ಜಿಲ್ಲಾ ಪ್ರಶಿಕ್ಷಣ ಪ್ರಕೋಷ್ಟದ ಸಂಚಾಲಕ ಕೃಷ್ಣ ಶೆಟ್ಟಿ ಕಡಬ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಂಡಲ ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೆನಾಲ ಸ್ವಾಗತಿಸಿ, ಮಂಡಲ ಉಪಾಧ್ಯಕ್ಷೆ ಇಂದಿರಾ ಬಿ.ಕೆ ವಂದಿಸಿದರು, ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.