ಸುಳ್ಯ:ವಿಧಾನಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧಪಟ್ಟು ಪ್ರಮುಖರಿಂದ ಅಭಿಪ್ರಾಯ ಸಂಗ್ರಹಿಸುವ ಪ್ರಕ್ರಿಯೆಯನ್ನು ಬಿಜೆಪಿ ಹಮ್ಮಿಕೊಂಡಿದೆ. ರಾಜ್ಯದ 224 ಕ್ಷೇತ್ರಗಳಲ್ಲಿ ಪಕ್ಷದ ಸ್ಥಳೀಯ ಪದಾಧಿಕಾರಿಗಳು ಹಾಗೂ ಮುಖಂಡರಿಂದ ಅಭಿಪ್ರಾಯ ಪಡೆಯಲಿದ್ದಾರೆ. ಪ್ರಮುಖರು ಭಾಗವಹಿಸಿ ಕ್ಷೇತ್ರದ ಅಭ್ಯರ್ಥಿಗಳ ಹೆಸರುಗಳನ್ನು ಸೂಚಿಸಿ, ಅಭಿಪ್ರಾಯ ತಿಳಿಸಲಿದ್ದಾರೆ. ಸುಳ್ಯ ವಿಧಾನಸಭಾ
ಕ್ಷೇತ್ತದ ಅಭ್ಯರ್ಥಿಯ ಆಯ್ಕೆಯ ಹಿನ್ನಲೆಯಲ್ಲಿ ಸುಳ್ಯ ಕ್ಷೇತ್ರದ ಪ್ರಮುಖರು ಪದಾಧಿಕಾರಿಗಳು ಮಾ.31ರಂದು ಮಂಗಳೂರಿಗೆ ತೆರಳಿದ್ದಾರೆ. ಸುಳ್ಯ ಕ್ಷೇತ್ರದ ಮಂಡಲ ಪ್ರಮುಖರು, ವಿವಿಧ ಮೋರ್ಚಾದ ಅಧ್ಯಕ್ಷರುಗಳು, ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರದ ಪ್ರಮುಖರು, ಪಕ್ಷದ ವಿವಿಧ ಜವಾಬ್ದಾರಿ ಇರುವವರು ಸೇರಿ 100 ಕ್ಕೂ ಹೆಚ್ಚು ಮಂದಿ ಮಂಗಳೂರಿಗೆ ತೆರಳಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದ್ದಾರೆ. ರಾಜ್ಯದಿಂದ ಆಗಮಿಸಿದ ಪ್ರಮುಖರು ಈ ರೀತಿ ಅಭಿಪ್ರಾಯ ಸಂಗ್ರಹಿಸಿದ ಬಳಿಕ
ಜಿಲ್ಲಾ ಘಟಕಗಳ ಸಮಿತಿಗಳ ಪ್ರಮುಖರು ಬೆಂಗಳೂರಿಗೆ ತೆರಳಿ ರಾಜ್ಯ ಘಟಕದ ಪ್ರಮುಖರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿ, ಅಭ್ಯರ್ಥಿಗಳ ಕುರಿತು ತಮ್ಮ ಅಭಿಪ್ರಾಯ ದಾಖಲಿಸಲಿದ್ದಾರೆ. ನಂತರ ರಾಜ್ಯ ಕೋರ್ ಕಮಿಟಿ ಸಭೆ ನಡೆದು ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಸಲಿದೆ. ಅಂತಿಮವಾಗಿ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ. ಹೀಗೆ ಒಟ್ಟು ನಾಲ್ಕು ಹಂತಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಲಾಗಿದೆ.