ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಾಗೂ ಕೊನೇ ಹಂತದ ಮತದಾನವು ನ.11 ರಂದು ನಡೆಯಲಿದೆ. ಮತದಾರರನ್ನು ಮನ ಗೆಲ್ಲಲು ಎನ್ಡಿಎ ಹಾಗೂ ಇಂಡಿಯಾ ಒಕ್ಕೂಟದ ಪರವಾಗಿ ಪ್ರಮುಖ ನಾಯಕರು ರಾಜ್ಯದ ವಿವಿಧೆಡೆ ಅಬ್ಬರದ ಪ್ರಚಾರ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಹಲವು ಜಿಲ್ಲೆಗಳಲ್ಲಿ ರ್ಯಾಲಿ ನಡೆಸಿದ್ದರು. ಕೇಂದ್ರ
ಗೃಹ ಸಚಿವ ಅಮಿತ್ ಶಾ ಅರವಲ್ ಜಿಲ್ಲೆಯಲ್ಲಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಧುಬನಿ ಜಿಲ್ಲೆಯಲ್ಲಿ ಭಾನುವಾರ ಪ್ರಚಾರ ನಡೆಸಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕಿಶನ್ಗಂಜ್, ಪೂರ್ಣಿಯಾ ಜಿಲ್ಲೆಗಳಲ್ಲಿ ಮೈತ್ರಿಪಕ್ಷದ ಅಭ್ಯರ್ಥಿಪರ ಮತಯಾಚಿಸಿದರು.ನಕ್ಸಲ್ಪೀಡಿತ ಇಮಾಮ್ಗಂಜ್ ಕ್ಷೇತ್ರದಿಂದ ಕೇಂದ್ರ ಸಚಿವ ಹಿಂದೂಸ್ತಾನಿ ಆವಾಂ ಮೋರ್ಚಾದ (ಜಾತ್ಯತೀತ) ಅಧ್ಯಕ್ಷ ಜಿತನ್ ರಾಂ ಮಾಂಝಿ ಅವರ ಸೊಸೆ ದೀಪಾ ಮಾಂಝಿ ಕಣದಲ್ಲಿದ್ದಾರೆ.ಎನ್ಡಿಎ ಒಕ್ಕೂಟ ರಾಷ್ಟ್ರೀಯ ಲೋಕಮೋರ್ಚಾದ ಪರವಾಗಿ ಉಪೇಂದ್ರ ಕುಶ್ವಾಹಾ ಪತ್ನಿ ಸ್ನೇಹಲತಾ ಅವರು ‘ಸಾಸಾರಾಂ’ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.ಬಿಹಾರ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಜೇಶ್ ರಾಮ್ ಔರಂಗಾಬಾದ್ನ ‘ಕುಟುಂಬ’ ಕ್ಷೇತ್ರದಿಂದ ಕಣದಲ್ಲಿದ್ದಾರೆ.
ಮಖ್ದುಂಪುರ (ಜೆಹನಾಬಾದ್) ಕ್ಷೇತ್ರದಲ್ಲಿ (2,47,574) ಕನಿಷ್ಠ ಮತದಾರರಿದ್ದು, ನಲಂದಾ ಜಿಲ್ಲೆಯ ಹಿಸುವಾ ಕ್ಷೇತ್ರದಲ್ಲಿ (3,67,667) ಗರಿಷ್ಠ ಮತದಾರರಿದ್ದಾರೆ.ಮೊದಲ ಹಂತದಲ್ಲಿ (ನವೆಂಬರ್ 6) 121 ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ ಶೇಕಡಾ 65.1ರಷ್ಟು ಮತ ಚಲಾವಣೆಯಾಗಿದೆ.
243 ಕ್ಷೇತ್ರಗಳ ಫಲಿತಾಂಶವು ನ.14ರಂದು ಪ್ರಕಟವಾಗಲಿದೆ.
ರಾಜ್ಯದಲ್ಲಿ ರಾಹುಲ್ ಗಾಂಧಿ ಒಟ್ಟು 15 ರ್ಯಾಲಿಗಳಲ್ಲಿ ಭಾಗವಹಿಸಿದ್ದರೆ, ನರೇಂದ್ರ ಮೋದಿ 14 ರ್ಯಾಲಿಗಳಲ್ಲಿ ಭಾಗಿಯಾಗಿದ್ದಾರೆ.












