ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಯ ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಗಳು ಬಹಿರಂಗವಾಗಿದ್ದು ಹಲವು ಸಮೀಕ್ಷೆಗಳು ಎನ್ಡಿಎಗೆ ಬಹುಮತ ಸಿಗಲಿವೆ ಎಂದು ಅಂದಾಜಿಸಿವೆ.
ಇಂದು ಸಂಜೆ 7ಕ್ಕೆ ಎರಡನೇ ಹಂತದ ಮತದಾನ ಅಂತ್ಯಗೊಳ್ಳುವ ಮೂಲಕ ಬಿಹಾರ ವಿಧಾನಸಭಾ ಚುನಾವಣೆ ಅಂತ್ಯವಾಗಿದ್ದು ಎಲ್ಲರ ಚಿತ್ತ ಮತ ಎಣಿಕೆಯತ್ತ ನೆಟ್ಟಿದೆ.ಇದಕ್ಕೂ ಮುನ್ನ ಹಲವು ಸಂಸ್ಥೆಗಳು ಬಿಹಾರ ವಿಧಾನಸಭೆ ಚುನಾವಣೆಯ ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಗಳು
ಬಹಿರಂಗವಾಗಿದೆ. 243 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.ಬಹುಮತಕ್ಕೆ 122 ಸ್ಥಾನಗಳನ್ನು ಗೆಲ್ಲುವುದು ಅನಿವಾರ್ಯ.ಒಟ್ಟು 243 ಸ್ಥಾನಗಳಿಗೆ ಎರಡು ಹಂತದಲ್ಲಿ ಯಶಸ್ವಿ ಮತದಾನ ನಡೆಯಿತು. ನವೆಂಬರ್ 14 ಕ್ಕೆ ಮತ ಎಣಿಕೆ ನಡೆದು ಅಂದೇ ಫಲಿತಾಂಶ ಪ್ರಕಟವಾಗಲಿದೆ.
10 ಕ್ಕೂ ಹೆಚ್ಚು ಸಂಸ್ಥೆಗಳು ಬಿಹಾರ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳನ್ನು ಪ್ರಕಟಿಸಿವೆ. ಅದರಲ್ಲಿ ಬರೋಬ್ಬರಿ 9 ಸಮೀಕ್ಷೆಗಳು ಎನ್ಡಿಎಗೆ ಬಹುಮತ ಎಂದು ಹೇಳಿವೆ. ಎಲ್ಲವೂ ಎನ್ಡಿಎಗೆ 130 ಕ್ಕೂ ಹೆಚ್ಚು ಸ್ಥಾನಗಳನ್ನು ತೋರಿಸಿವೆ. ಎನ್ಡಿಎನಲ್ಲಿ ಬಿಜೆಪಿ, ಜೆಡಿಯು, ಎಲ್ಜೆಪಿ ಹಾಗೂ ಎಚ್ಎಎಂ ಪಕ್ಷಗಳು ಸೇರಿವೆ. ಇವರಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ನಂತರ ಜೆಡಿಯು ಎಲ್ಜೆಪಿ ಇರಲಿವೆ ಎಂದು ಅಂದಾಜಿಸಿವೆ.ಜರ್ನೊ ಮಿರರ್ ಎಂಬ ಒಂದು ಸಂಸ್ಥೆ ಮಾತ್ರ ಮಹಾಘಟಬಂಧನ್ಗೆ ಬಹುಮತ ತೋರಿಸಿದೆ. ಅವರ ಪ್ರಕಾರ ಮಹಾಘಟಬಂಧನ್ಗೆ 130 ರಿಂದ 140 ಸ್ಥಾನ ಹಾಗೂ ಎನ್ಡಿಎಗೆ 100 ರಿಂದ 110 ಸ್ಥಾನಗಳು ಸಿಗಲಿವೆ.
ಬಿಹಾರದಲ್ಲಿ ಮತ್ತೆ ಎನ್ಡಿಎ ಅಧಿಕಾರ ಹಿಡಿಯುವುದು ನಿಚ್ಚಳ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಐಎಎನ್ಎಸ್ ಮಾಟ್ರಿಸ್
ಸಂಸ್ಥೆಯ ಮತಗಟ್ಟೆಯ ಸಮೀಕ್ಷೆಯೂ ಸಹ ಎನ್ಡಿಎಗೆ ಬಹುಮತ ಎಂದು ಹೇಳಿದೆ. ಅವರ ಪ್ರಕಾರ ಎನ್ಡಿಎಗೆ 147 ರಿಂದ 167 ಸ್ಥಾನಗಳು ಹಾಗೂ ಮಹಾಘಟಬಂಧನ್ಗೆ 70 ರಿಂದ 90 ಸ್ಥಾನಗಳು ಸಿಗಲಿವೆ ಎಂದು ಅಂದಾಜಿಸಿವೆ.
ಟೈಮ್ಸ್ ನೌ ಹಾಗೂ ಜೆವಿಸಿ ಸಂಸ್ಥೆಯ ಸಮೀಕ್ಷೆಯೂ ಸಹ ಎನ್ಡಿಎಗೇ ಬಹುಮತ ಎಂದಿದೆ. ಅವರ ಪ್ರಕಾರ ಎನ್ಡಿಎಗೆ 135ರಿಂದ 150 ಹಾಗೂ ಮಹಾಘಟಬಂಧನ್ ಅವರಿಗೆ 88 ರಿಂದ 103 ಸೀಟುಗಳು ಸಿಗಲಿವೆ ಎಂದು ಅಂದಾಜಿಸಿದೆ.
ಪೀಪಲ್ ಪಲ್ಸ್ ಸಂಸ್ಥೆಯೂ ಸಹ ಎನ್ಡಿಎಗೆ ಬಹುಮತ ಬರಬಹುದು ಎಂದು ಅಂದಾಜಿಸಿದೆ. ಅದರ ಪ್ರಕಾರ ಎನ್ಡಿಎಗೆ 133 ರಿಂದ 159 ಸ್ಥಾನ ಮತ್ತು ಮಹಾಘಟಬಂಧನ್ಗೆ 75 ರಿಂದ 101 ಸ್ಥಾನಗಳು ಸಿಗಲಿವೆ ಎನ್ನಲಾಗಿದೆ.
ಪೋಲ್ ಡೈರಿ ಸಂಸ್ಥೆ ಎನ್ಡಿಎ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿ, ಎಂಜಿಬಿಗೆ ಅಂದರೆ ಮಹಾಘಟಬಂದನ್ಗೆ ಅತೀ ಕಡಿಮೆ ಸ್ಥಾನಗಳನ್ನು ತೋರಿಸಿದೆ. ಅವರ ಪ್ರಕಾರ ಎನ್ಡಿಎ 184 ರಿಂದ 209, ಎಂಜಿಬಿ ಕೇವಲ 32 ರಿಂದ 49.
ಜೆವಿಸಿ ಎಕ್ಸಿಟ್ ಪೋಲ್ ಎಂಬುದು ಸಹ ಎನ್ಡಿಎಗೆ ಬಹುಮತ ಎಂದಿದೆ. ಅದರ ಪ್ರಕಾರ ಎನ್ಡಿಎ 135 ರಿಂದ 150. ಎಂಜಿಬಿ 88 ರಿಂದ 103.
ಪೀಪಲ್ ಇನ್ಸೈಟ್ಸ್ ಮತ್ತು ಟಿವಿ9 ಸಂಸ್ಥೆಗಳ ಜಂಟಿ ಸಮೀಕ್ಷೆಯೂ ಸಹ ಎನ್ಡಿಎಗೆ ಬಹುಮತ ಎಂದು ಹೇಳಿವೆ. ಅವರ ಪ್ರಕಾರ ಎನ್ಡಿಎಗೆ 133ರಿಂದ 140 ಸ್ಥಾನ ಬರಬಹುದು ಎಂದು ಹೇಳಿದೆ.












