ಸುಳ್ಯ: ಬೆಳ್ಳಾರೆ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಸುಹಾಸ್ ಆರ್. ಅವರಿಗೆ ವರ್ಗಾವಣೆಯಾಗಿದೆ. ಬೆಳ್ಳಾರೆ ಪೊಲೀಸ್ ಠಾಣೆಯ ನೂತನ ಎಸ್ಐ ಆಗಿ ಸಂತೋಷ್ ಬಿ.ಪಿ.ಅವರನ್ನು ನೇಮಕ ಮಾಡಿ ಸರಕಾರ ಆದೇಶ ಮಾಡಿದೆ ಎಂದು ತಿಳಿದು ಬಂದಿದೆ. ಬೆಳ್ತಂಗಡಿ ಸಂಚಾರಿ ಠಾಣೆಯ ಎಸ್ಐ ಆಗಿದ್ದ
ಸಂತೋಷ್ ಅವರಿಗೆ ಬೆಳ್ಳಾರೆಗೆ ವರ್ಗಾವಣೆಯಾಗಿದೆ. ಒಂದು ವರ್ಷದ ಹಿಂದೆ ಸುಹಾಸ್ ಅವರು ಬೆಳ್ಳಾರೆ ಠಾಣೆಯ ಎಸ್ಐ ಆಗಿ ಆಗಮಿಸಿದ್ದರು. ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಹಾಗೂ ಅಹಿತಕರ ಘಟನೆಯ ಬಳಿಕ ಸುಹಾಸ್ ಅವರು ಬೆಳ್ಳಾರೆ ಠಾಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ಹೊಸದಾಗಿ ಬೆಳ್ಳಾರೆಗೆ ಆಗಮಿಸುವ ಸಂತೋಷ್ ಅವರು ಪ್ರೊಬೇಷನರಿ ಎಸ್ಐ ಆಗಿ ಸುಳ್ಯದಲ್ಲಿ ಕೆಲವು ಕಾಲ ಕರ್ತವ್ಯ ನಿರ್ವಹಿಸಿದ್ದರು.