ಪುತ್ತೂರು: ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಪ್ರವೀಣ್ ನೆಟ್ಟಾರು(32) ಹತ್ಯೆಯಿಂದ ಆಕ್ರೋಶಿತರಾದ ಕಾರ್ಯಕರ್ತರು ಡಿಸಿ ಬರಬೇಕೆಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ರಾತ್ರಿ ಪುತ್ತೂರಿನ ಖಾಸಗೀ ಆಸ್ಪತ್ರೆ ಮುಂಭಾಗ ನಡೆಯಿತು.ಬಳಿಕ ತಡ ರಾತ್ರಿ ಮಂಗಳೂರಿನಿಂದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಆಗಮಿಸಿ ಪ್ರತಿಭಟನಾಕಾರರ ಜತೆ
ಮಾತನಾಡಿ ಮನವೊಲಿಸಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು. ಪ್ರವೀಣ್ ನೆಟ್ಟಾರು ಮೃತಪಟ್ಟಿರುವುದು ಘೋಷಣೆಯಾಗುತ್ತಲೇ ನೂರಾರು ಮಂದಿ ಆಸ್ಪತ್ರೆಯ ಮುಂಭಾಗದಲ್ಲಿ ಜಮಾಯಿಸಿದ್ದರು. ಜಿಲ್ಲಾಧಿಕಾರಿಯವರು ಸ್ಥಳಕ್ಕೆ ಬಂದು ಪರಿಹಾರ ಘೋಷಿಸುವ ತನಕ ಮೃತದೇಹವನ್ನು ಕೊಂಡೊಯ್ಯಲು ಬಿಡುವುದಿಲ್ಲ ಎಂದು ಆಸ್ಪತ್ರೆ ಮುಂಭಾಗ ನೆರೆದಿದ್ದವರು ಪಟ್ಟು ಹಿಡಿದರು. ಅಲ್ಲದೇ ಆಸ್ಪತ್ರೆ ಮುಂಭಾಗದ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದರು. ಬಳಿಕ ತಡ ರಾತ್ರಿ 1.30 ರ ಸುಮಾರಿಗೆ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಅವರು ಆಗಮಿಸಿ ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿದರು. ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ಬಂಧಿಸಿ ಅವರಿಗೆ ಕಠಿನ ಶಿಕ್ಷೆಯನ್ನು ಕೊಡಿಸಲಾಗುವುದು. ಈಗಾಗಲೇ ಪೊಲೀಸ್ ಇಲಾಖೆ ಇದರ ತನಿಖೆ ಆರಂಭಿಸಿದ್ದಾರೆ. ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕೆಂಬ ಮನವಿಯನ್ನು ಸರಕಾರಕ್ಕೆ ಸಲ್ಲಿಸಿ ಪರಿಹಾರ ಕೊಡಿಸಲು ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ ಡಿಸಿಯವರು ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದರು. ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ವರಿಷ್ಟಾಧಿಕಾರಿ ಋಷಿಕೇಷ್ ಸೋನಾವಣೆ, ಪುತ್ತೂರು ಸಹಾಯಕ ಆಯುಕ್ತರಾದ ಗಿರೀಶ್ ನಂದನ್,ಡಿವೈಎಸ್‌ಪಿ ಗಾನ ಪಿ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಭಗವಾನ್ ಸೋನಾವಣೆ, ಡಿವೈಎಸ್ಪಿ ಡಾ.ಗಾನಾ ಪಿ.ಕುಮಾರ್, ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಹಾಗೂ ಸುಳ್ಯ, ಬೆಳ್ಳಾರೆ ಪೊಲೀಸರ ನೇತೃತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.