ಬೆಳ್ಳಾರೆ:ಇಂದು ಶಿಕ್ಷಣ ವ್ಯವಸ್ಥೆ ಬೆಳೆದಿದೆ. ಎಲ್ಲರೂ ವಿದ್ಯಾವಂತರು, ಸುಶಿಕ್ಷಿತರೂ ಆಗಿದ್ದಾರೆ. ಆದರೆ ವಿದ್ಯಾವಂತರ ಸಂಖ್ಯೆ ಹೆಚ್ಚಗಿದ್ದರೂ ಸಮಾಜದಲ್ಲಿ ಅಪರಾಧ ಪ್ರಕರಣಗಳು ಏರುತ್ತಿರುವುದು ಖೇದಕರ ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಸಚಿವ ಎಸ್. ಅಂಗಾರ ಹೇಳಿದ್ದಾರೆ. ಮಾ.13 ರಂದು ಸೋಮವಾರ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಬೆಳ್ಳಾರೆ ಪೊಲೀಸ್ ಠಾಣೆಯ ನೂತನ ಕಟ್ಟಡವನ್ನು ಉದ್ಘಾಟಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು

ಮಾತನಾಡಿದರು. ಅಪರಾಧ ಪ್ರಕರಣಗಳು ಕಡಿಮೆಯಾಗಿ ಪೊಲೀಸ್ ಠಾಣೆಗಳು ಕಡಿಮೆಯಾಗಬೇಕಾಗದರೆ ಜನರು ಪರಿವರ್ತನೆಯಾಗಬೇಕು. ಜನರ ಭಾವನೆಗಳು ಬದಲಾಗಬೇಕು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾ ರಂಗದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯವಿಲ್ಲ, ಸಮಾಜ ಬದಲಾವಣೆಯಾಗಬೇಕಾದರೆ ಪ್ರತಿಯೊಬ್ಬರ ಪ್ರಯತ್ನ, ಕೊಡುಗೆ ಅಗತ್ಯ ಎಂದರು. ಮಾನವೀಯತೆ, ಕರುಣೆ ಬೆಳೆಸಿಕೊಳ್ಳಬೇಕು, ಆಗ ಕ್ರೌರ್ಯ, ದ್ವೇಷ ನಶಿಸಿ ಅನಾಹುತಗಳು ಕಡಿಮೆಯಾಗುತ್ತದೆ. ಪ್ರೀತಿ ವಿಶ್ವಾಸ ಕರುಣೆಯಿಂದ ನಡೆದುಕೊಂಡಾಗ ಎಲ್ಲಾ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಸಮಾಜದಲ್ಲಿ ಶಾಂತಿ, ಸೌಹಾರ್ಧತೆ ನೆಲೆಸುತ್ತದೆ ಎಂದು ಅವರು ಹೇಳಿದರು.

ಉತ್ತಮ ಸೇವೆಯಿಂದ ಕಟ್ಟಡಕ್ಕೆ ಜೀವಂತಿಕೆ:
ಇಲಾಖೆಯ ಅಧಿಕಾರಿಗಳು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿ ಜನರಿಗೆ ಉತ್ತಮ ಸೇವೆ ನೀಡಿದಾಗ ಯಾವುದೇ ಕಚೇರಿಯಲ್ಲಿ, ಕಟ್ಟಡದಲ್ಲಿ ಜೀವಂತಿಕೆ ಇರಲು ಸಾಧ್ಯ. ಆಗ ಜನರು ಹತ್ತಿರವಾಗುತ್ತಾರೆ, ಇಲಾಖೆಗೆ ಉತ್ತಮ ಹೆಸರು, ಅಧಿಕಾರಿಗಳಿಗೆ ಗೌರವ ಬರುತ್ತದೆ ಎಂದು ಸಚಿವರು ಹೇಳಿದರು.1.32 ಕೋಟಿ ವೆಚ್ಚದಲ್ಲಿ ಠಾಣೆಗೆ ನೂತನ ಕಟ್ಟಡ ನಿರ್ಮಾಣ ಆಗಿದೆ. ಪೊಲೀಸ್ ಇಲಾಖೆಗೆ ಮಂಜೂರಾಗಿರುವ ಸ್ಥಳದಲ್ಲಿ 3.5 ಕೋಟಿ ರೂ ವೆಚ್ಚದಲ್ಲಿ ಪೊಲೀಸ್ ವಸತಿ ಗೃಹ ನಿರ್ಮಾಣ ಆಗಲಿದೆ ಎಂದರು.

ಜನಸ್ನೇಹಿ ಪೊಲೀಸ್ ವ್ಯವಸ್ಥೆ- ಎಸ್ಪಿ ಡಾ.ವಿಕ್ರಮ್ ಅಮಟೆ:
ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ವಿಕ್ರಮ್ ಅಮಟೆ ಪ್ರಸ್ತಾವಿಕವಾಗಿ ಮಾತನಾಡಿ ಜಿಲ್ಲೆಯ ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಲು ಆದ್ಯತೆ ನೀಡಲಾಗುತಿದೆ. ಇದಕ್ಕೆ ಜನರ ಸಹಕಾರ ಕೂಡ ಅತೀ ಅಗತ್ಯ. ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರು ಪರಸ್ಪರ ವಿಶ್ವಾಸದಿಂದ ಇದ್ದಾಗ ಪೊಲೀಸ್ ವ್ಯವಸ್ಥೆ ಇನ್ನಷ್ಟು ಪರಿಣಾಮಕಾರಿಯಾಗಿರಲು ಸಾಧ್ಯ ಎಂದು ಹೇಳಿದರು

ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ, ಸುಳ್ಯ ಪ್ರಭಾರ ತಹಸೀಲ್ದಾರ್ ಮಂಜುನಾಥ, ಸುಳ್ಯ ವೃತ್ತ ನಿರೀಕ್ಷಕ ರವೀಂದ್ರ ಸಿ. ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ವಿಕ್ರಮ್ ಅಮಟೆ ಸ್ವಾಗತಿಸಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರ್ಮಪ್ಪ ಎನ್. ಎಂ. ವಂದಿಸಿದರು. ಗಾಯತ್ರಿ ಪ್ರಾರ್ಥಿಸಿದರು.ನಿವೃತ್ತ ಎಎಸ್ಐ ಭಾಸ್ಕರ ಅಡ್ಕಾರ್ ಕಾರ್ಯಕ್ರಮ ನಿರೂಪಿಸಿದರು. ಬೆಳ್ಳಾರೆ ಉಪನಿರೀಕ್ಷರಾದ ಸುಹಾಸ್ ಆರ್, ಶಿವಕುಮಾರ್, ಸುಳ್ಯ ಎಸ್ಐ ದಿಲೀಪ್ ಜಿ.ಆರ್, ಸುಬ್ರಹ್ಮಣ್ಯ ಎಸ್ಐ ಮಂಜುನಾಥ್ ಹಾಗು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.