ಮಂಗಳೂರು:ತೋಟಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದರೆ ಪರಿಹಾರವನ್ನು ತುಂಬಿಕೊಡುವ ನಿಟ್ಟಿನಲ್ಲಿ 2025-26 ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮುಗಳಿಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ಅಡಿಕೆ ಹಾಗೂ
ಕಾಳುಮೆಣಸು ಬೆಳೆಗಳನ್ನು ಅಧಿಸೂಚಿಸಲಾಗಿರುತ್ತದೆ. ಸಾಲ ಪಡೆಯದ ರೈತರ ನೋಂದಣಿಗೆ ಆಗಸ್ಟ್ 14 ಕೊನೆಯ ದಿನ ಹಾಗೂ ಸಾಲ ಪಡೆದ ರೈತರಿಗೆ ಆಗಸ್ಟ್ 30 ಕೊನೆಯ ದಿನ. ಈ ಹಿನ್ನೆಲೆಯಲ್ಲಿ ಈವರೆಗೆ ಯೋಜನೆಯಡಿ ನೋಂದಣಿಗೊಳ್ಳದ ರೈತರು ತುರ್ತಾಗಿ ಯೋಜನೆಯಡಿ ನೋಂದಣಿಗೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಬೆಳೆಸಾಲ ಪಡೆದ ರೈತರು ಬೆಳೆಸಾಲ ಹೊಂದಿರುವ ಬ್ಯಾಂಕ್ನಲ್ಲಿ ಹಾಗೂ ಬೆಳೆಸಾಲ ಹೊಂದಿಲ್ಲದ ರೈತರು ತಮ್ಮ ಉಳಿತಾಯ ಖಾತೆ ಹೊಂದಿರುವ ಬ್ಯಾಂಕ್ಗಳಲ್ಲಿ ಯೋಜನೆಯಡಿ ನೋಂದಣಿಗೊಳ್ಳಬಹುದು. ಹಾಗೂ ಸಾಮಾನ್ಯ ಸೇವಾ ಕೇಂದ್ರ ಮತ್ತು ಗ್ರಾಮ ವನ್ ಗಳ ಮೂಲಕವೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯಡಿ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ರೈತರು ಪಾವತಿಸಬೇಕಾದ ಪ್ರೀಮಿಯಂ ಮೊತ್ತ ಪ್ರತಿ ಹೆಕ್ಟೇರಿಗೆ ಕ್ರಮವಾಗಿ ರೂ.6400 ಹಾಗೂ ರೂ.2350 ಗಳಾಗಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಮಾ ಸಂಸ್ಥೆಯಾಗಿ ಪ್ರಸಕ್ತ ಸಾಲಿಗೆ ಟಾಟಾ ಎಐಜಿ ಸಂಸ್ಥೆಯು ಆಯ್ಕೆಯಾಗಿದೆ. ಹೆಚ್ಚಿನ ಮಾಹಿತಿಗೆ ದ.ಕ ತೋಟಗಾರಿಕಾ ಇಲಾಖೆಯನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





