ಬೆಳಗಾವಿ:ಕಡಿಮೆ ಮೊತ್ತ ಪರಿಹಾರ ಪಾವತಿಯ ಮೂಲಕ
ರಾಜ್ಯದ ಕೃಷಿಕರಿಗೆ ನಿರಾಶೆ ಉಂಟು ಮಾಡಿರುವ ಬೆಳೆ ವಿಮೆ ಪರಿಹಾರ ಸಂಬಂಧಿಸಿದ ವಿಷಯವನ್ನು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನ ಪರಿಷತ್ ಅಧಿವೇಶನದಲ್ಲಿ ಉಡುಪಿ– ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಪ್ರಸ್ತಾಪಿಸಿದರು.ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು ರಾಜ್ಯದ ಶೇಕಡಾ 60ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿರುವ ಕೃಷಿ ವಲಯವು ಈ ಬಾರಿ ಅತಿಯಾದ
ಮಳೆ, ಉಷ್ಣತೆಯ ಏರುಪೇರಿನಿಂದ ಭಾರೀ ಸಂಕಷ್ಟಕ್ಕೆ ಸಿಲುಕಿದೆ. ಅಡಿಕೆ ಸೇರಿದಂತೆ ಅನೇಕ ಬೆಳೆಗಳು ಶೇ.75 ಕ್ಕೂ ಹೆಚ್ಚು ಹಾನಿಗೊಳಗಾದರೂ, ಹವಾಮಾನ ಆಧಾರಿತ ಬೆಳೆ ವಿಮೆ ರೈತರಿಗೆ ನಿರಾಶೆ ಮೂಡಿಸಿದೆ.ಕೆಲವು ಪ್ರದೇಶಗಳಲ್ಲಿ ಕಟ್ಟಿ ಪಾವತಿಸಿದ ವಿಮಾ ಪ್ರೀಮಿಯಂಗೂ ಸಮನಾಗದ ಪರಿಹಾರ ಮೊತ್ತ ಜಮೆಯಾಗಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.
ಕಳೆದ ವರ್ಷ ಸೆಪ್ಟೆಂಬರ್- ಅಕ್ಟೋಬರ್ ತಿಂಗಳಲ್ಲಿ ತೀವ್ರ ಮಳೆ, ಮಾರ್ಚ್-ಏಪ್ರಿಲ್ ನಲ್ಲಿ ಅತಿಯಾದ ಬಿಸಿಲು ಬಿಸಿಲು, ಮೇ ನಂತರ ಆರು ತಿಂಗಳು ನಿರಂತರ ಮಳೆಯಿದ್ದರೂ ವಿಮೆ ಪರಿಹಾರವು ಅದರ ಅನುರೂಪವಾಗಿ ಲಭಿಸದಿರುವುದನ್ನು ಶಾಸಕರು ಪ್ರಶ್ನಿಸಿದರು. ರೀತಿಯ ಅತಿ ಕಡಿಮೆ ವಿಮಾ ಪರಿಹಾರದಿಂದ ಬೆಳೆ ಹಾನಿ ಸಂಭವಿಸಿದ ರೈತರಿಗೆ ಮತ್ತಷ್ಟು ಸಮಸ್ಯೆ ಎದುರಾಗಲಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ, ಪರಿಹಾರ ಮೊತ್ತವು ಹಿಂದಿನ ವರ್ಷಗಳಿಗಿಂತ ತಡವಾಗಿ ಅಂದರೆ ಸೆಪ್ಟೆಂಬರ್/ಅಕ್ಟೋಬರಿನ ಬದಲು ಇದೀಗ ಡಿಸೆಂಬರ್ ತಿಂಗಳಲ್ಲಿ ಬರುವುದರಿಂದ ಕೃಷಿ ಚಟುವಟಿಕೆಗಳೇ ಕುಂಠಿತಗೊಳ್ಳುತ್ತಿರುವ ಬಗ್ಗೆ ಶಾಸಕರು ಗಂಭೀರ ಕಳವಳ ವ್ಯಕ್ತಪಡಿಸಿದರು.ವಿಮಾ ಪರಿಹಾರವನ್ನು ಸಕಾಲದಲ್ಲಿ ರೈತರ ಖಾತೆಗೆ ಜಮೆ ಮಾಡುವ ವ್ಯವಸ್ಥೆ ಅನಿವಾರ್ಯ.
ಈ ಬಾರಿ ನೀಡಿರುವ ಮೊತ್ತ ಪೂರ್ಣ ಪರಿಹಾರವೇ ಅಥವಾ ಮಧ್ಯಂತರ ಪರಿಹಾರವೇ? ಎಂಬುದನ್ನು ಸರ್ಕಾರ ತಕ್ಷಣ ಸ್ಪಷ್ಟಪಡಿಸಬೇಕು.
ರಾಜ್ಯದ 6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ಬೆಳೆಯಲಾಗುತ್ತಿದ್ದು, ‘ಸುಳಿ ಕೊಳೆ ರೋಗ’ ತೀವ್ರವಾಗಿರುವ ಕಾರಣ ತೆಂಗು ಬೆಳೆಯನ್ನು ಕೂಡ ಬೆಳೆ ವಿಮೆ ವ್ಯಾಪ್ತಿಗೆ ಸೇರಿಸಬೇಕೆಂದು ಹೇಳಿದರು.
ಗ್ರಾಮಗಳಲ್ಲಿ ಇರುವ ಮಳೆಮಾಪಕ ಮತ್ತು ಹವಾಮಾನ ದಾಖಲು ಸಾಧನಗಳು ಸರಿಯಾಗಿಲ್ಲದಿರುವುದರಿಂದ ವಿಮಾ ಲೆಕ್ಕಾಚಾರದಲ್ಲೇ ತಪ್ಪುಗಳು ಸಂಭವಿಸುತ್ತಿದ್ದು, ಅವನ್ನು ತಕ್ಷಣ ದುರಸ್ಥಿಗೊಳಿಸಬೇಕು ಎಂಬುದಾಗಿ ಒತ್ತಾಯಿಸಿದರು.
ಕೃಷಿಕರ ನಷ್ಟಕ್ಕೆ ಹೊಂದುವಂತೆ ಖಾಸಗಿ ಅಥವಾ ರೈತರೇ ದಾಖಲಿಸಿರುವ ಮಳೆಪ್ರಮಾಣ ಆಧರಿಸಿ ಪರಿಹಾರ ನೀಡುವ ಮಾರ್ಗವನ್ನೂ ಸರ್ಕಾರ ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.
ಶಾಸಕರ ಮಾತು ಆಲಿಸಿದ ನಂತರ, ಸಭಾನಾಯಕರು ಸಂಬಂಧಪಟ್ಟ ಸಚಿವರಿಗೆ ಜರುಗಿದ ವಿವರಗಳನ್ನು ತಕ್ಷಣ ಒದಗಿಸಲು ಮತ್ತು ಇದರ ಬಗ್ಗೆ ಸೂಕ್ತವಾದ ಕ್ರಮವನ್ನು ಕೈಗೊಳ್ಳಲು ಸೂಚನೆ ನೀಡುವುದಾಗಿ ಘೋಷಿಸಿದರು ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.













