ಸುಳ್ಯ:ಸುಳ್ಯ ತಾಲೂಕಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ಮೊತ್ತ ಜಮೆಯಲ್ಲಿ ಕೃಷಿಕರಿಗೆ ಕಡಿಮೆ ಮೊತ್ತ ಪಾವತಿಯಾಗಿದೆ ಎಂಬ ವಿಚಾರದ ಕುರಿತು ಚರ್ಚಿಸಲು ಶಾಸಕಿ ಭಾಗೀರಥಿ ಮುರುಳ್ಯ ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ, ಪ್ರಮುಖರ ಹಾಗೂ ರೈತ ಸಂಘಟನೆಗಳ ಪ್ರಮುಖರ ಸಭೆ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಹವಾಮಾನ ಆಧಾರಿತ ಬೆಳೆ ವಿಮೆ ಪಾವತಿಯಲ್ಲಿ ರೈತರಿಗೆ ಈ ಬಾರಿ
ಕಡಿಮೆ ಮೊತ್ತ ಜಮೆ ಆಗಿದೆ. ಹವಾಮಾನದ ದತ್ತಾಂಶ ಸಲ್ಲಿಕೆಯಲ್ಲಿ ಆಗಿರುವ ವ್ಯತ್ಯಾಸದಿಂದ ಈ ರೀತಿ ಆಗಿರುವ ಸಾಧ್ಯತೆ ಇದೆ. ಆದುದರಿಂದ ದಾಖಲಾದ ಮಳೆ, ಉಷ್ಣಾಂಶದ ಪರಿಷ್ಕೃತ ದತ್ತಾಂಶವನ್ನು ಪಡೆದು ಅದನ್ನು ವಿಮಾ ಕಂಪೆನಿಗೆ ನೀಡಿ ನ್ಯಾಯಯುತವಾದ ಪರಿಹಾರ ಒದಗಿಸಲು ಪ್ರಯತ್ನ ನಡೆಸಬೇಕು ಎಂದು ಸಭೆಯಲ್ಲಿ ಭಾಗವಹಿಸಿದ ಪ್ರಮುಖರು ಆಗ್ರಹಿಸಿದರು.
ಕಳೆದ ವರ್ಷಗಳಲ್ಲಿ ಸುಳ್ಯ ತಾಲೂಕಿನಲ್ಲಿ ಕೃಷಿಕರಿಗೆ ಉತ್ತಮ ಪರಿಹಾರ ಮೊತ್ತ ಪಾವತಿಯಾಗಿತ್ತು. ಕಳೆದ ವರ್ಷಗಳಿಂದ ಅಧಿಕ ಮಳೆ ಮತ್ತು ಉಷ್ಣಾಂಶ ದಾಖಲಾದರೂ ಈ ಬಾರಿ ವಿಮಾ ಪರಿಹಾರ ತುಂಬಾ ಕಡಿಮೆ ಪಾವತಿಯಾಗಿದೆ. ಹವಾಮಾನ ದತ್ತಾಂಶ ಸಲ್ಲಿಕೆಯಲ್ಲಾದ ವ್ಯತ್ಯಾಸದಿಂದ ಈ ರೀತಿ ಕಡಿಮೆ ಪರಿಹಾರ ಪಾವತಿ ಆಗಿರುವ ಸಾಧ್ಯತೆ ಇದೆ.ಇದನ್ನು ಸರಿ ಪಡಿಸಿ ನ್ಯಾಯಯುತವಾದ ಪರಿಹಾರ ದೊರಕಿಸಬೇಕು ಎಂದು ಪ್ರಮುಖರು ಆಗ್ರಹಿಸಿದರು.

ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಶಾಸಕರ ಸಭೆ ನಡೆಸಿ ಈ ಕುರಿತು ಸರ್ಕಾರಿ ಮಟ್ಟದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಮಾತನಾಡಿದ ಪ್ರಮುಖರಾದ ಕಿಶೋರ್ ಕುಮಾರ್ ಶಿರಾಡಿ, ಹರೀಶ್ ಕಂಜಿಪಿಲಿ, ಎಂ.ವೆಂಕಪ್ಪ ಗೌಡ, ಸಂತೋಷ್ ಕುತ್ತಮೊಟ್ಟೆ, ವಿಕ್ರಮ್ ಎ.ವಿ.ಅಡ್ಪಂಗಾಯ, ರಮಾನಂದ ಎಣ್ಣೆಮಜಲು, ಸುದರ್ಶನ ಪಾತಿಕಲ್ಲು, ಪುರುಷೋತ್ತಮ ಕೋಲ್ಚಾರು ಮತ್ತಿತರರು ಆಗ್ರಹಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ರೈತರಿಗೆ ಬೆಳೆವಿಮೆಯ ಸೂಕ್ತ ಪರಿಹಾರ ಪಾವತಿಯಾಗಿಲ್ಲ ಎಂಬ ಕೂಗು ಕೇಳಿ ಬಂದಿದೆ. ನ್ಯಾಯಯುತವಾದ ಪರಿಹಾರ ಪಾವತಿಯಾಗಬೇಕು ಎಂಬ ನಿಟ್ಟಿನಲ್ಲಿ ಸಭೆ ಕರೆಯಲಾಗಿದೆ.ಈ ಕುರಿತು ವಿಧಾನ ಮಂಡಲದ ಅಧಿವೇಶನದಲ್ಲಿಯೂ ಚರ್ಚೆಯಾಗಿದೆ. ಈ ಬಗ್ಗೆ ಮತ್ತೊಮ್ಮೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಶಾಸಕರ ಸಭೆ ಕರೆದು ಚರ್ಚಿಸಿ ಸರಕಾರದ ಗಮನಕ್ಕೆ ತಂದು ನ್ಯಾಯಯುತ ಪರಿಹಾರ ಒದಗಿಸಲು ಪ್ರಯತ್ನ ನಡೆಸಲಾಗುವುದು ಎಂದು ಅವರು ಹೇಳಿದರು.

ಕೃಷಿಕರಿಗೆ ಮಳೆ, ಉಷ್ಣಾಂಶ ಮಾಪನ ವರದಿ ಲಭ್ಯವಾಗುವಂತೆ ಮಾಡಬೇಕು,ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಳೆ ಮಾಪನ ಕೇಂದ್ರ ಸ್ಥಾಪನೆ ಮಾಡಬೇಕು. ಮುಂದಿನ ದಿನಗಳಲ್ಲಿ ಬೆಳೆ ವಿಮೆ ನೀಡುವ ಸಂದರ್ಭದಲ್ಲಿ ಈ ದತ್ತಾಂಶಗಳನ್ನು ಕೂಡ ತಾಳೆ ಮಾಡಬೇಕು ಎಂದು ಪ್ರಮುಖರು ಸಭೆಯಲ್ಲಿ ಆಗ್ರಹಿಸಿದರು. ಜ.30ರೊಳಗೆ ಎಲ್ಲಾ ಕೃಷಿಕರಿಗೂ ಸರಿಯಾದ ಪ್ರಮಾಣದಲ್ಲಿ ಬೆಳೆವಿಮೆ ಪಾವತಿಯಾಗಬೇಕು ಎಂದು ಸಭೆಯಲ್ಲಿ ಕೃಷಿಕ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.
ತಹಶೀಲ್ದಾರ್ ಎಂ.ಮಂಜುಳ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರಮೋದ್, ಕೃಷಿ ಇಲಾಖೆಯ ಸಹಾಯ ನಿರ್ದೇಶಕ ಗುರುಪ್ರಸಾದ್, ವಿಮಾ ಕಂಪೆನಿಯ ಪ್ರತಿನಿಧಿ ವಿನಯ ಕುಮಾರ್ ಸಭೆಯಲ್ಲಿ ಮಾಹಿತಿ ನೀಡಿದರು.
ಎಸ್ಸಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಸುಳ್ಯ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎ.ಟಿ.ಕುಸುಮಾಧರ, ಪ್ರಮುಖರಾದ ಅವಿನಾಶ್ ಕುರುಂಜಿ, ಸುನಿಲ್ ಕೇರ್ಪಳ, ಎ.ಜಿ, ಡಾ.ಲಕ್ಷ್ಮೀಶ, ಜಯಪ್ರಕಾಶ್ ಕೂಜುಗೋಡು, ಮಹೇಶ್ ಕುಮಾರ್ ಮೇನಾಲ, ಹೂವಪ್ಪ ಸಂಪ್ಯಾಡಿ, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಸುಹಾನ, ಅರಬಣ್ಣ ಪೂಜೇರಿ, ವಿಜೇತ್ ಮತ್ತಿತರರು ಉಪಸ್ಥಿತರಿದ್ದರು.












