ಸುಳ್ಯ:ಹಲವು ಕಡೆಗಳ ರೈತರಿಗೆ ಬೆಳೆ ವಿಮೆ ಬಂದಿದ್ದರೂ ಸುಳ್ಯ ಮತ್ತು ಕಡಬ ತಾಲೂಕಿನ ಕೆಲವು ಗ್ರಾಮಗಳ ರೈತರು ಹವಾಮಾನ ಆಧಾರಿತ ಬೆಳೆ ವಿಮಾ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂಬ ದೂರುಗಳು ಕೇಳಿ ಬಂದಿದೆ. ಕಡಬ ತಾಲೂಕಿನ ಎಣ್ಣೂರು ಗ್ರಾಮದ ಕೃಷಿಕರಿಗೆ ಹವಾಮಾನ ಬೆಳೆ ವಿಮೆ ಇನ್ನೂ ಬಂದಿಲ್ಲ. ಅದೇ ರೀತಿ ಎಡಮಂಗಲ,ಸುಳ್ಯದ ಮುರುಳ್ಯ ಗ್ರಾಮದ ಕೃಷಿಕರಿಗೂ ವಿಮಾ ಸೌಲಭ್ಯ ಸಿಕ್ಕಿಲ್ಲ ಎಂದು ಬೆಳೆಗಾರರು
ಹೇಳುತ್ತಿದ್ದಾರೆ. ನಿಗದಿತ ಅವಧಿಯಲ್ಲಿ ಅಡಕೆ ಬೆಳೆಗಾರರು ಪ್ರೀಮಿಯಂ ತುಂಬಿದ್ದಾರೆ. ಕಳೆದ ಅವಧಿಯಲ್ಲಿ ಕ್ಲಪ್ತ ಸಮಯಕ್ಕೆ ಹವಾಮಾನ ಆಧಾರಿತ ಬೆಳೆ ವಿಮೆ ಲಭಿಸಿದೆ. ಆದರೆ ಈ ವರ್ಷ ಸರಿಯಾಗಿಯೇ ಪ್ರೀಮಿಯಂ ಪಾವತಿಸಿದ್ದರೂ ಕೆಲವು ಗ್ರಾಮಗಳಿಗೆ ವಿಮಾ ಮೊತ್ತ ಸಿಕ್ಕಿಲ್ಲ ಎನ್ನುತ್ತಾರೆ ಕೃಷಿಕರಾದ ಕೆ.ಪ್ರಸನ್ನ ಎಣ್ಮೂರು. ಕೆಲವು ಗ್ರಾಮಗಳಲ್ಲಿ ಅಕ್ಟೋಬರ್ ತಿಂಗಳಲ್ಲಿಯೇ ಬೆಳೆ ವಿಮೆ ಬಂದಿದ್ದರೂ ಎಣ್ಮೂರು, ಮುರುಳ್ಯ, ಎಡಮಂಗಲ ಗ್ರಾಮದ ಕೃಷಿಕರಿಗೆ ಯಾರಿಗೂ ಇನ್ನೂ ವಿಮಾ ಹಣ ಬಂದಿಲ್ಲ ಎನ್ನುತ್ತಾರೆ ಅವರು. ಎಲ್ಲ ಕಡೆಗಳಲ್ಲೂ ಹವಾಮಾನ ಆಧಾರಿತ ಬೆಳೆ ವಿಮೆ ಪಾವತಿಯಾಗುತ್ತಿದೆ. ಆದರೆ ಸುಳ್ಯ ಮತ್ತು ಕಡಬ ತಾಲೂಕುಗಳ ಕೆಲವು ಗ್ರಾಮದ ಬೆಳೆಗಾರರು ಇದರಿಂದ ವಂಚಿತಗೊಂಡಿದ್ದಾರೆ. ಇದನ್ನು ಅಧಿಕಾರಿಗಳು ಮತ್ತು ಇನ್ಸೂರೆನ್ಸ್ ಕಂಪನಿ ಗಂಭೀರವಾಗಿ ಪರಿಗಣಿಸಿ ವಿಮೆ ಪಾವತಿ ಮಾಡಬೇಕು ಮತ್ತು ಇಂತಹ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕು ಎಂದು ಹೇಳುತ್ತಾರೆ ಪ್ರಸನ್ನ ಎಣ್ಮೂರು.
ಕೆಲವು ತಾಂತ್ರಿಕ ಸಮಸ್ಯೆಗಳಿಂದ ವಿಮೆ ಮೊತ್ತ ಪಾವತಿ ಆಗದೇ ಇರುವ ಸಾಧ್ಯತೆ ಇದೆ ಎನ್ನುತ್ತಾರೆ ಅಧಿಕಾರಿಗಳು. ಆಧಾರ್ ಜೋಡಣೆ, ಆರ್ಟಿಸಿಯಲ್ಲಿ ಹೆಸರು ವ್ಯತ್ಯಾಸ, ಹೊಸದಾಗಿ ಬೆಳೆ ನಮೂದು ಆಗದೇ ಇರುವುದು, ಬ್ಯಾಂಕ್ ಖಾತೆಯಲ್ಲಿ ವ್ಯತ್ಯಾಸ ಮೊದಲಾದ ತಾಂತ್ರಿಕ ಕಾರಣಗಳಿಂದ ವಿಮೆ ಪಾವತಿ ಆಗದೇ ಇರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ.
‘ಸುಳ್ಯ ತಾಲೂಕಿನಿಂದ ಕಡಬ ತಾಲೂಕಿಗೆ ಸೇರ್ಪಡೆಯಾದ ಮತ್ತು ಎರಡು ತಾಲೂಕುಗಳಿಗೆ ಹಂಚಿ ಹೋದ ಕೆಲವು ಗ್ರಾಮಗಳ ಕೃಷಿಕರಿಗೆ ಹವಾಮಾನ ಆಧಾರಿತ ಬೆಳೆ ವಿಮೆಯ ಮೊತ್ತ ಲಭಿಸಿಲ್ಲ ಎಂಬ ದೂರುಗಳು ಬಂದಿದೆ. ಈ ಬಗ್ಗೆ ಪರಿಶೀಲಿಸಲಾಗುತಿದೆ. ಇವರಿಗೂ ಮುಂದಿನ ದಿನಗಳಲ್ಲಿ ವಿಮಾ ಮೊತ್ತ ಬರಬಹುದು ಎಂದು ಸುಳ್ಯ ತಾಲೂಕು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಸುಹಾನಾ ಹೇಳಿದ್ದಾರೆ.














