ಸುಳ್ಯ:ಸುಳ್ಯ ತಾಲೂಕಿನ ರೈತರಿಗೆ ಬೆಳೆ ವಿಮೆ ಪರಿಹಾರ ಕಡಿಮೆ ಮೊತ್ತ ಪಾವತಿಯಾಗುತ್ತಿದ್ದು, ರೈತರಿಗೆ ನ್ಯಾಯಯುತವಾದ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರುಗಳು ಮತ್ತು ಮುಖ್ಯ ಕಾರ್ಯನಿರ್ವಾಣಾಧಿಕಾರಿಗಳು ಹಾಗೂ ಪ್ರಮುಖರ ಸಭೆಯಲ್ಲಿ ನಿರ್ಧರಿಸಲಾಯಿತು.ಡಿ.9 ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯ
ಅಧ್ಯಕ್ಷತೆಯನ್ನು ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ ವಹಿಸಿದ್ದರು. ಈ ಬಾರಿ ರೈತರಿಗೆ ಖಾತೆಗೆ ಬೆಳೆ ವಿಮೆಯ ಮೊತ್ತವು ಕಡಿಮೆ ಪಾವತಿಯಾಗುತಿದೆ.ಈ ಬಾರಿ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ಬೆಳೆ ತುಂಬಾ ನಷ್ಟ ಆಗಿದ್ದರೂ ಪರಿಹಾರ ತೀರಾ ಕಡಿಮೆ ಮೊತ್ತ ಜಮೆ ಆಗುತಿರುವ ಬಗ್ಗೆ ಕೃಷಿಕರು ಹೇಳುತ್ತಿದ್ದಾರೆ ಎಂದು ಸಭೆಯಲ್ಲಿ ಭಾಗವಹಿಸಿದ ಪ್ರಮುಖರು ಹೇಳಿದರು.
ಈ ಬಗ್ಗೆ ಚರ್ಚಿಸಿ ಒಂದು ವಾರಗಳ ಕಾಲ ಕಾದು ನೋಡಿ ಜಿಲ್ಲೆಯ ಪ್ರತಿ ತಾಲೂಕಿನ ರೈತರಿಗೆ ಪಾವತಿಯಾದ ವಿಮಾ ಮೊತ್ತದ ಅಂಕಿ ಅಂಶಗಳನ್ನು ಗಮನಿಸಿ ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು. ವಿಮಾ ಕಂಪನಿಗಳು ಮಳೆ ಮಾಪನ ಅಳತೆ, ಹವಾಮಾನ ಆಧಾರಿತ ವಿಮಾ ಮೊತ್ತ ಪಾವತಿಸಿರುವ ವಿಷಯಗಳ ಮಾಹಿತಿ ಪಡೆದುಕೊಂಡು ಮುಂದಿನ ಹಂತದಲ್ಲಿ ಕಾನೂನು ರೀತಿಯ ಹೋರಾಟ ಸೇರಿದಂತೆ ರೈತರ ಹಿತ ಕಾಯುವ ದೃಷ್ಠಿಯಲ್ಲಿ ಎಲ್ಲಾ ಪ್ರಯತ್ನ ನಡೆಸಲು ತೀರ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್.ಎನ್.ಮನ್ಮಥ ಮಾತನಾಡಿ ಬೆಳೆ ವಿಮೆ ಜಮೆಯಲ್ಲಿ ಆಗುವ ವ್ಯತ್ಯಾಸಗಳ ಪರಿಶೀಲನೆ ಮಾಡಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಜೊತೆಯೂ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ,ಜಯಪ್ರಕಾಶ್ ಕುಂಚಡ್ಕ,ಸಂತೋಷ್ ಕುತ್ತಮೊಟ್ಟೆ ,ವಿಕ್ರಂ ಅಡ್ಪಂಗಾಯ,ವಿಷ್ಣು ಭಟ್ ಮೂಲೆತೋಟ, ದಾಮೋದರ ಗೌಡ ಮದುವೆಗದ್ದೆ, ಪ್ರಮುಖರಾದ ಹರೀಶ್ ಕಂಜಿಪಿಲಿ, ಎನ್.ಎ ರಾಮಚಂದ್ರ, ಶ್ರೀಪತಿ ಭಟ್ ಮಜಿಗುಂಡಿ, ಪ್ರವೀಣ್ ರಾವ್ ದೊಡ್ಡತೋಟ, ಸುದರ್ಶನ ಎಸ್ ಪಿ ,ಉದಯಕುಮಾರ್ ಮಂಡೆಕೋಲು ,ಅನಂತರಾಮ ಖಂಡಿಗಮೂಲೆ,ಪಿ.ಎಸ್ ಗಂಗಾಧರ, ವೀರೇಂದ್ರ ಜೈನ್, ವಾಸುದೇವ ನಾಯಕ್, ಪುರುಷೋತ್ತಮ, ಪ್ರಶಾಂತ್ ಪೂಂಬಾಡಿ ಸೇರಿದಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಮತ್ತು ನಿರ್ದೇಶಕರು ಮತ್ತಿತರರು ಉಪಸ್ಥಿತರಿದ್ದರು. ಸಂತೋಷ್ ಕುತ್ತಮೊಟ್ಟೆ ಸ್ವಾಗತಿಸಿ ವಂದಿಸಿದರು.













