ಸುಳ್ಯ:ಬೆಳೆವಿಮೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದ್ದು, ವಿಮೆ ಪಾವತಿಸಿದಕ್ಕಿಂತ ಕಡಿಮೆ ಹಣ ಜಮೆ ಆಗಿರುವುದನ್ನು ವಿರೋಧಿಸಿ ಹಾಗೂ ಸಮಸ್ಯೆ ಬಗೆಹರಿಸುವಂತೆ ಒತ್ತಾಹಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಸುಳ್ಯ ತಾಲೂಕು ಕಚೇರಿ ಬಳಿ ಬುಧವಾರ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಮಾತನಾಡಿದ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಿ, ಬೆಳೆವಿಮೆ ಕಡಿಮೆ
ಜಮೆ ಆಗಲು ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜನರಿಗೆ ನ್ಯಾಯ ಒದಗಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಬೇಕು. ಪರಿಹಾರ ಒದಗಿಸಲು ಯಾವುದೇ ದಾಖಲೆ ಇಲ್ಲದಿದ್ದಲ್ಲಿ ಕಳೆದ ಬಾರಿಯಂತೆ ಪರಿಹಾರ ಒದಗಿಸಿ ಎಂದ ಅವರು ಜ.30ರೊಳಗೆ ಸರಿಯಾದ ಪರಿಹಾರ ವಿತರಣೆ ಮಾಡದೇ ಇದ್ದಲ್ಲಿ ಜಿಲ್ಲಾ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ನ.ಪಂ.ಮಾಜಿ ಸದಸ್ಯ ಎಂ.ವೆಂಕಪ್ಪ ಗೌಡ, ಸಂತೋಷ್ ಕುತ್ತಮೊಟ್ಟೆ, ಹರೀಶ್ ಕಂಜಿಪಿಲಿ ಮತ್ತಿತರರು ಮಾತನಾಡಿದರು.
ಪ್ರತಿಭಟನಾ ನಿರತರು ನೀಡಿದ ಮನವಿ ಸ್ವೀಕರಿಸುವ ಸಂದರ್ಭದಲ್ಲಿ ತಹಸೀಲ್ದಾರ್ ಇಲ್ಲದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಬೆಳೆ ವಿಮೆ ಯಾವ ಕಾರಣಕ್ಕೆ ಕಡಿಮೆ ಜಮೆ ಆಗಿದೆ ಎಂಬುದಕ್ಕೆ ಹಾಗೂ ನೀವು ಏನು ಕ್ರಮಕೈಗೊಂಡಿದ್ದೀರಿ ಎಂದು ಸ್ಥಳದಲ್ಲಿದ್ದ ಉಪತಹಸೀಲ್ದಾರ್ ಅವರಲ್ಲಿ ಪ್ರಶ್ನಿಸಿದರು. ಅಧಿಕಾರಿಗಳ ಉತ್ತರಕ್ಕೆ ಸಮಾಧಾನಗೊಳ್ಳದ ಪ್ರತಿಭಟನಾಕಾರರು, ಕೂಡಲೇ ಸ್ಥಳಕ್ಕೆ ತಹಸೀಲ್ದಾರ್ ಅವರೇ ಬರಬೇಕೆಂದು ಒತ್ತಾಯಿಸಿ ತಾಲೂಕು ಕಚೇರಿ ಎದುರು ಕುಳಿದು ಧರಣಿ ಆರಂಭಿಸಿದರು. ಅಲ್ಲಿಗೆ ಆಗಮಿಸಿದ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪ್ರತಿಭಟನಾಕಾರರನ್ನು ಇಲಾಖೆ ವತಿಯಿಂದ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ರೈತ ಪ್ರಮುಖರ ಸಭೆ ನಡೆಸಿ ಅಹವಾಲು ಸ್ವೀಕರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ದೂರವಾಣಿ ಮೂಲಕ ತಹಸೀಲ್ದಾರ್ ಭರವಸೆ ನೀಡಿದ ಬಳಿಕ ಪ್ರತಿಭಟನೆ

ಹಿಂತೆಗೆದುಕೊಳ್ಳಲಾಯಿತು. ಮುಂದಿನ ಸಭೆಗೆ ಅಗತ್ಯ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ರೈತರು ಒತ್ತಾಯಿಸಿದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ದರ್ಶನ್, ಪ್ರಮೋದ್, ಅರಬಣ್ಣ, ಕೃಷಿ ಇಲಾಖೆ ಗುರುಪ್ರಸಾದ್, ಉಪತಹಸೀಲ್ದಾರ್ ಚಂದ್ರಶೇಖರ ಅವರು ಮನವಿ ಸ್ವೀಕರಿಸಿದರು.
ಪ್ರಮುಖರಾದ ರಮಾನಂದ ಎಣ್ಣೆಮಜಲು, ವಿಕ್ರಂ ಅಡ್ಪಂಗಾಯ, ಡಿ.ಕೆ.ಅವಿನಾಶ್ ಸುಳ್ಯ, ಸುಭೋದ್ ಶೆಟ್ಟಿ ಮೇನಾಲ, ವಿನಯ ಕುಮಾರ್ ಕಂದಡ್ಕ, ಶ್ರೀಕಾಂತ್ ಮಾವಿನಕಟ್ಟೆ, ಗುಣವತಿ ಕೊಲ್ಲಂತಡ್ಕ, ಕೆ.ಆರ್.ಗಂಗಾಧರ, ಎ.ಟಿ.ಕುಸುಮಾಧರ, ಪುರುಷೋತ್ತಮ ಕಿರ್ಲಾಯ, ಜಗನ್ನಾಥ ಜಯನಗರ,ಶಶಿಕಲಾ ನೀರಬಿದಿರೆ, ಜಯಪ್ರಕಾಶ್ ಕೂಜುಗೋಡು, ಪುಷ್ಪಾಮೇದಪ್ಪ, ಗಿರೀಶ್ ಕಲ್ಲುಗದ್ದೆ, ಸೋಮನಾಥ ಪೂಜಾರಿ, ಶಿವಾನಂದ ಕುಕ್ಕುಂಬಳ, ಕೇಶವ ಅಡ್ತಲೆ, ಡಾ.ಲಕ್ಷ್ಮೀಶ, ದಯಾನಂದ ಕುರುಂಜಿ, ಕೆ.ಸಿ.ಸದಾನಂದ, ಚಂದ್ರಹಾಸ ಶಿವಾಲ,ನಾರಾಯಣ ಎಸ್ ಎಂ ಶಾಂತಿನಗರ, ಡಾ.ಲಕ್ಷ್ಮೀಶ, ಕರುಣಾಕರ ಎ.ಜಿ,ರಾಮಚಂದ್ರ ಕಲ್ಲುಗದ್ದೆ, ಸುಧಾಕರ ಎ.ಜಿ,ಉಮಾಶಂಕರ ಅಡ್ಯಡ್ಕ,ಶಿವರಾಮ ಕೇರ್ಪಳ, ಸೇರಿದಂತೆ ನೂರಾರು ರೈತರು ಪ್ರತಿಭಟನಾ ಸಭೆಯಲ್ಲಿ ಉಪಸ್ಥಿತರಿದ್ದರು.
















