ಸುಳ್ಯ:ಈ ಬಾರಿ ರೈತರಿಗೆ ಸೂಕ್ತ ರೀತಿಯ ಬೆಳೆ ವಿಮೆ ಪರಿಹಾರ ನೀಡಲಾಗಿಲ್ಲ, ಅದನ್ನು ಕೂಡಲೇ ಸರಿಪಡಿಸಿ ನ್ಯಾಯಯುತ ಬೆಳೆ ವಿಮೆ ಪರಿಹಾರವನ್ನು ರೈತರಿಗೆ ಪಾವತಿಸಬೇಕು ಎಂದು ಆಗ್ರಹಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಡಿ.24ರಂದು ಸುಳ್ಯ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಸುಳ್ಯದ ಸಿಎ ಬ್ಯಾಂಕ್ ಸಭಾಂಗಣದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಸಭೆ ನಡೆಸಿದ
ರೈತರು ಸೂಕ್ತ ಬೆಳೆ ವಿಮೆ ಸಿಗದೇ ಇರುವ ಬಗ್ಗೆ ಚರ್ಚಿಸಿ, ಸಮಾಲೋಚನೆ ನಡೆಸಿದರು.ವೇದಿಕೆಯ ಜಿಲ್ಲಾ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಿ, ರೈತರು ಪಾವತಿಸಿದಕ್ಕಿಂತಲೂ ಕಡಿಮೆ ವಿಮೆ ಪರಿಹಾರ ಲಭ್ಯವಾಗಿದೆ, ಅದೆಷ್ಟೋ ರೈತರು ವಿವಿಧ ರೀತಿಯಲ್ಲಿ ಹಣ ಹೊಂದಿಸಿ ಬೆಳೆ ವಿಮೆ ಪಾವತಿಸಿದ್ದಾರೆ. ಈ ಬಾರಿಯ ಅತ್ಯಧಿಕ ಮಳೆಗೆ ಕೃಷಿ ಅಪಾರ ಹಾನಿಯಾಗಿದ್ದು, ಹೆಚ್ಚಿನ ಬೆಳೆ ವಿಮೆ ನಿರೀಕ್ಷೆಯಲ್ಲಿದ್ದ ರೈತರಿಗೆ ಬೆಳೆ ವಿಮೆ ಪರಿಹಾರದಲ್ಲಿ ಅನ್ಯಾಯವಾಗಿದೆ.ರೈತರಿಗೆ ನ್ಯಾಯಯುತ ಬೆಳೆ ವಿಮೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ ಅವರು, ನ್ಯಾಯಯುತ ಸೂಕ್ತ ಬೆಳೆ ವಿಮೆ ಪರಿಹಾರಕ್ಕೆ ಆಗ್ರಹಿಸಿ ಸುಳ್ಯದ ತಾಲೂಕು ಕಚೇರಿ ಬಳಿ ಡಿ.24ರಂದು ಬೆಳಗ್ಗೆ 11 ಗಂಟೆಗೆ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ, ಅಲ್ಲಿಯೂ ನ್ಯಾಯ ಸಿಗದೇ ಇದ್ದಲ್ಲಿ ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು. ಹೋರಾಟದ ಅಂಗವಾಗಿ ಹೋಬಳಿ ಮಟ್ಟದಲ್ಲಿ ಸಭೆ ನಡೆಸುವ ಬಗ್ಗೆ ಹಾಗೂ ಪ್ರತಿಭಟನೆಗೆ ಪ್ರತೀ ಗ್ರಾಮದಿಂದಲೂ ರೈತರು ಭಾಗವಹಿಸಲು ಪ್ರಚಾರ ಮಾಡುವ ಬಗ್ಗೆ ತೀರ್ಮಾನಿಸಲಾಯಿತು.
ರೈತರು ಸಭೆಯಲ್ಲಿ ತಮ್ಮ ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ಮಲೆನಾಡು ಜನಹಿತ ರಕ್ಷಣಾ ವೇದಿಕೆ ಜಿಲ್ಲಾ ಪ್ರಮುಖ್ ರಮಾನಂದ ಎಣ್ಣೆಮಜಲು, ಸುಳ್ಯ ತಾಲೂಕು ಪ್ರಮುಖ್ ಹೂವಪ್ಪ ಸಂಪ್ಯಾಡಿ ಕೊಲ್ಲಮೊಗ್ರು, ಸುಳ್ಯ ತಾಲೂಕು ಯೂತ್ ಪ್ರಮುಖ್ ಡಿ.ಕೆ.ಅವಿನಾಶ್ ಸುಳ್ಯ, ವೇದಿಕೆಯ ಪ್ರಮುಖರಾದ ವೆಂಕಟ್ರಮಣ ಪತ್ತಾಜೆ, ಬಾಲಕೃಷ್ಣ, ಎ.ಜಿ.ಕರುಣಾರ ಸೇರಿದಂತೆ ರೈತರು ಸಭೆಯಲ್ಲಿ ಭಾಗವಹಿಸಿದ್ದರು.













