ಪುತ್ತೂರು:ಪ್ರಾಕೃತಿಕ ವಿಕೋಪದಿಂದ ಹಾನಿಯಾದ ಬೆಳೆಗಳಿಗೆ ಪಾವತಿಸಿದ ಪರಿಹಾರ ಮೊತ್ತಮತ್ತು ಹವಾಮಾನ ಆಧಾರಿತ ಬೆಳೆ ವಿಮೆ ತಡವಾಗಿರುವ ಮತ್ತು ಪರಿಹಾರ ಮೊತ್ತ ಕಡಿಮೆಯಾಗಿರುವ ಬಗ್ಗೆ ಬುಧವಾರ ಬೆಳಗಾವಿಯಲ್ಲಿ ನಡೆದ ವಿಧಾಸಭಾ ಅಧಿವೇಶನದಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಪ್ರಸ್ತಾಪ ಮಾಡಿದ್ದು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸರಕಾರ ವಿಧಾನಸಭಾ ಅಧ್ಯಕ್ಷ ಯು ಟಿ ಖಾದರ್ ನೇತೃತ್ವದಲ್ಲಿ ತೋಟಗಾರಿಕಾ ಸಚಿವರು, ವಿಮಾಕಂಪೆನಿ ಮತ್ತು ದಕ ಹಾಗೂ ಉಡುಪಿ ಜಿಲ್ಲೆಯ ಶಾಸಕರ ಸಭೆಯನ್ನು ನಡೆಸುವುದಾಗಿ ತೀರ್ಮಾನವನ್ನು ಕೈಗೊಳ್ಳಲಾಯಿತು.ಸಭೆಯಲ್ಲಿ
ವಿಷಯ ಪ್ರಸ್ತಾಪಿಸಿದ ಶಾಸಕರು ‘ ಪ್ರಾಕೃತಿಕ ವಿಕೋಪದಿಂದ ಹಾನಿಯಾದ ಬೆಳೆಗಳಿಗೆ ಪಾವತಿಸಿದ ಪರಿಹಾರ ಮೊತ್ತಮತ್ತು ಹವಾಮಾನ ಆಧಾರಿತ ಬೆಳೆ ವಿಮೆ ತಡವಾಗಿರುವ ಮತ್ತು ಪರಿಹಾರ ಮೊತ್ತವೂ ಕಡಿಮೆಯಾಗಿದೆ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಂಬ ಸಂಸ್ಥೆಯು ಟೆಲಿಮೆಟ್ರಿಕ್ ಮಾಪನ ಅಳವಡಿಸಿ ಹವಾಮಾನ ಆಧಾರಿತ ಬೆಳೆ ವಿಮಾ ಸಮೀಕ್ಷೆಯನ್ನು ನಡೆಸಿದೆ. ಈ ಸಮೀಕ್ಷೆ ಆಧಾರವಾಗಿಟ್ಟುಕೊಂಡು ಬೆಳೆ ವಿಮೆ ಪರಿಹಾರವನ್ನು ಪಾವತಿ ಮಾಡಲಾಗುತ್ತದೆ. ಕಳೆದ ಬಾರಿಗಿಂತ ಈ ಬಾರಿ ಎರಡು ತಿಂಗಳ ತಡವಾಗಿ ವಿಮಾ ಮೊತ್ತವನ್ನು ನೀಡಲಾಗಿದೆ.
ಎರಡು ತಿಂಗಳು ವಿಳಂಬವಾಗಿರುವುದು ದೊಡ್ಡ ವಿಚಾರವಲ್ಲ ಆದರೆ ಪಾವತಿಯಾಗಿರುವ ಮೊತ್ತ ಅತ್ಯಂತ ಎಷ್ಟು ಕಡಿಮೆಯಾಗಿದೆಯೆಂದರೆ ಕಟ್ಟಿದ ಪ್ರೀಮಿಯಂ ಕಂತಿಗಿಂತಲೂ ಕಡಿಮೆ ಇದ್ದು ಇದು ಅತ್ಯಂತ ಗಂಭೀರವಾದ ವಿಚಾರವಾಗಿದೆ. ಇಷ್ಟೊಂದು ಕಡಿಮೆ ಮೊತ್ತವನ್ನು ವಿಮಾ ಕಂಪೆನಿ ಪಾವತಿ ಮಾಡಿರುವುದು ದುರದೃಷ್ಟಕರವಾಗಿದೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಸರಿಯಾಗಿ ಪಾವತಿ ಮಾಡಬೇಕಿದೆ ಎಂದು ಹೇಳಿದರು.
ಉಭಯ ಜಿಲ್ಲೆಗಳ ಕೃಷಿಕರು ಸಂಕಷ್ಟದಲ್ಲಿದ್ದಾರೆ. ಒಂದು ಕಡೆ ವಿಪರೀತ ಮಳೆ ಇನ್ನೊಂದೆಡೆ ಹಳದಿರೋಗಿ, ಎಲೆ ಚುಕ್ಕಿ ರೋಗದಿಂದ ಬೆಳೆದ ಅಡಿಕೆ ಸಂಪೂರ್ಣ ನಾಶವಾಗಿದೆ. ಬೆಳೆ ವಿಮೆಯಾದರೂ ಸಿಗುತ್ತದಲ್ಲ ಎಂಬ ಧೈರ್ಯದಿಂದ ಇದ್ದ ಕೃಷಿಕರು ಈಗ ಚಿಂತಾಕ್ರಾಸ್ತರಾಗಿದ್ದಾರೆ. ಬೆಳೆ ವಿಮೆ ಸಿಗುತ್ತದೆ ಎಂದು ಸಾಲ ಮಾಡಿ ತಮ್ಮ ಕೃಷಿಯನ್ನು ಉಳಿಸುವ ಕೆಲಸವನ್ನು ಮಾಡಿದ್ದಾರೆ. ಇತ್ತ ಬೆಳೆದ ಅಡಿಕೆಯೂ ಇಲ್ಲ, ಬೆಳೆ ವಿಮೆಯೂ ಇಲ್ಲ ಎಂಬಂತಾಗಿದೆ. ಕೃಷಿಕರು ಏನು ಮಾಡಬೇಕು ಎಂದು ದಿಕ್ಕೇ ತೋಚದಂತಾಗಿದೆ ಎಂದು ಹೇಳಿದರು.













