ಸುಳ್ಯ:ಸುಳ್ಯ ನಗರದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಉಪಟಳ ತಡೆಯುವ ನಿಟ್ಟಿನಲ್ಲಿ ಬೀದಿ ನಾಯಿಗಳ ಸಂತಾನ ನಿಯಂತ್ರಣ ಮಾಡುವ ಬಗ್ಗೆ ಬೀದಿ ನಾಯಿಗಳ ನಿಯಂತ್ರಣ ಸಂತಾನ ನಿಯಂತ್ರಣ ಮೇಲ್ವಿಚಾರಣೆ ಮತ್ತು ಅನುಷ್ಠಾನ ಸಮಿತಿ ಸಭೆ ನಗರ ಪಂಚಾಯತ್ನಲ್ಲಿ ನಡೆಯಿತು. ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಶುವೈದ್ಯಕೀಯ ಸೇವಾ ಇಲಾಖೆಯ
ಸಹಾಯಕ ನಿರ್ದೇಶಕರಾದ ಡಾ.ನಿತಿನ್ ಪ್ರಭು, ನಗರ ಪಂಚಾಯತ್ ಆರೋಗ್ಯಾಧಿಕಾರಿ ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು. ಬೀದಿ ನಾಯಿಗಳ ನಿಯಂತ್ರಣಕ್ಕೆ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆ ನಡೆಸಲು 3 ಲಕ್ಷ ರೂ ಅನುದಾನ ಮೀಸಲಿರಿಸಲಾಗಿದ್ದು. ಬೀದಿನಾಯಿಗಳ ಸಂತಾನ ಹರಣ ಚಿಕಿತ್ಸೆ ಮಾಡಲು ಏಜೆನ್ಸಿ ನಿರ್ಣಯಿಸಲು ಟೆಂಡರ್ ಕರೆಯಲು ನಿರ್ಧರಿಸಲಾಯಿತು. ಬೀದಿನಾಯಿಗಳಿಗೆ ಆಹಾರ ಹಾಕುವ ಬಗ್ಗೆ ಇರುವ ಮಾರ್ಗಸೂಚಿಗಳನ್ನು ತಿಳಿಸುವ ಬಗ್ಗೆ ಜಾಗೃತಿ ಮೂಡಿಸಲು ಬ್ಯಾನರ್ ಅಳವಡಿಸಲು ನಿರ್ಧರಿಸಲಾಯಿತು. ಖಾಸಗೀ ವ್ಯಕ್ತಿಗಳು ಕೂಡ ತಮ್ಮ ಸಾಕು ನಾಯಿಗಳ ಮರಿಗಳನ್ನು ಬೀದಿಗೆ ಬಿಡುವುದನ್ನು ತಪ್ಪಿಸಲು ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ನಡೆಸುವಂತೆ ಸೂಚಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ನಗರ ಪಂಚಾಯತ್ ಸದಸ್ಯರಾದ ಕೆ.ಎಸ್.ಉಮ್ಮರ್, ಶೀಲಾ ಅರುಣ ಕುರುಂಜಿ, ಶರೀಫ್ ಕಂಠಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.









