ಸುಳ್ಯ:ಸುಳ್ಯ ನಗರದಲ್ಲಿ ಬೀದಿ ನಾಯಿಗಳ ಕಾಟ ವಿಪರೀತ ಏರಿದ್ದು ಸಾರ್ವಜನಿಕರು ಭಯಭೀತರಾಗಿದ್ದಾರೆ. ನಗರದಲ್ಲಿ ಬೀದಿ ನಾಯಿಗಳ ಹಾವಳಿ ಅಧಿಕವಾಗಿದ್ದು ಸಾರ್ವಜನನಿಕರನ್ನು ಅಟ್ಟಾಡಿಸಿ ಕಚ್ಚುತಿದೆ.ಗಾಂಧಿನಗರ ನಾವೂರಿನ ಪವನ್ ಎಂಬ ಯುವಕನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದು ನಾಯಿ ಕಚ್ಚಿ ಯುವಕನ ಕೈಗೆ ತೀವ್ರ ತರಹದ ಗಾಯಗಳಾಗಿದೆ. ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೀದಿ ನಾಯಿಗಳನ್ನು ನಿಯಂತ್ರಣ ಮಾಡಬೇಕು ಎಂಬ ಬೇಡಿಕೆ ಬಹಳ ವರ್ಷಗಳಿಂದ ಕೇಳಿ ಬಂದಿದೆ. ಇದರ ಬಗ್ಗೆ
ಪ್ರಮುಖರು ನೀಡಿದ ಪ್ರತಿಕ್ರಿಯೆ ಇಲ್ಲಿದೆ.
‘ನಾನು ನಗರ ಪಂಚಾಯತ್ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ನಿರ್ಣಯ ಕೈಗೊಳ್ಳಲಾಗಿತ್ತು. ಬೀದಿ ನಾಯಿಗಳಿಗೆ ಸಂತಾನ ಹರಣ ಚಿಜಿತ್ಸೆ ಮಾಡುವುದು ಮಾತ್ರ ಬೀದಿ ನಾಯಿಗಳ ನಿಯಂತ್ರಣಕ್ಕೆ ಇರುವ ಉಪಾಯ. ಈ ಹಿನ್ನಲೆಯಲ್ಲಿ ಪಶು ವೈದ್ಯಕೀಯ ಇಲಾಖೆ, ಆರೋಗ್ಯ ಇಲಾಖೆ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಸಭೆ ಜಿಲ್ಲಾಮಟ್ಟದಲ್ಲಿ ನಡೆದಿತ್ತು. ಬೀದಿನಾಯಿಗಳ ಸಂತಾನ ಹರಣ ಚಿಕಿತ್ಸೆ ಮಾಡಿ ನಿಯಂತ್ರಣ ಮಾಡಬೇಕು ಎಂದು ನಿರ್ಧರಿಸಲಾಗಿದೆ ಎಂದು ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಹೇಳುತ್ತಾರೆ.
ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ ಅವರು ಪ್ರತಿಕ್ರಿಯೆ ನೀಡಿ’ ಬೀದಿನಾಯಿಗಳ ನಿಯಂತ್ರಣ ಸಂಬಂಧಿಸಿ ನಾಯಿಗಳ ಸಂತಾನಹರಣ ಮಾಡಲು 3 ಲಕ್ಷ ರೂ ಅನುದಾನ ಮೀಸಲಿರಿಸಲಾಗಿದೆ. ನಗರ ಪಂಚಾಯತ್, ಪಶು ವೈದ್ಯಕೀಯ ಇಲಾಖೆ, ಆರೋಗ್ಯ ಇಲಾಖೆಯ ಅಧಿಕಾರಿಗಳ ಸಮಿತಿ ರಚಿಸಲಾಗಿದೆ ಎಂದು ಹೇಳಿದ್ದಾರೆ. ಬೀದಿ ನಾಯಿಗಳನ್ನು ಹಿಡಿದು ಸಂತಾನ ಹರಣ ನಡೆಸಿ ಕೆಲವು ದಿನ ಆರೈಕೆ ಮಾಡಿ ಅವುಗಳನ್ನು ಎಲ್ಲಿ ಹಿಡಿದದಿದೆಯೋ ಅಲ್ಲೇ ಬಿಡಬೇಕು ಎಂಬ ನಿರ್ದೇಶನ ಇದೆ ಎಂದು ಅವರು ಹೇಳುತ್ತಾರೆ.
ಬೀದಿ ನಾಯಿಗಳ ನಿಯಂತ್ರಣಕ್ಕೆ ತುರ್ತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನ.ಪಂ.ಸದಸ್ಯ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ. ನಗರ ಪಂಚಾಯತ್ ಆಡಳಿತ ಮಂಡಳಿ ಇಲ್ಲದೇ ಇರುವುದು ಕೂಡ ದೊಡ್ಡ ಸಮಸ್ಯೆಯಾಗಿದೆ. ಸರಕಾರ ನ.ಪಂ.ಅಧ್ಯಕ್ಷ ಉಪಾಧ್ಯಕ್ಷತೆಗೆ ಮೀಸಲಾತಿ ಪ್ರಕಟಿಸಿ ಆಯ್ಕೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನ.ಪಂ.ಸದಸ್ಯ ಕೆ.ಎಸ್.ಉಮ್ಮರ್ ಮಾತನಾಡಿ’ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂತಾನ ಹರಣ ಚಿಕಿತ್ಸೆ ನೀಡಬೇಕು. ಅಲ್ಲದೆ ನಗರದಲ್ಲಿ ಹಲವು ಮಂದಿ ಸಾಕು ನಾಯಿಗಳು ಹಾಗೂ ಸಾಕು ಪ್ರಾಣಿಗಳನ್ನು ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಿಗೆ ಬಿಡುತ್ತಿದ್ದಾರೆ. ನಾಯಿಗಳನ್ನು ಹಗಲು ಕಟ್ಟಿ ಹಾಕಿ ಸಾಕಬೇಕು. ರಸ್ತೆಗೆ ನಾಯಿಗಳನ್ನು ಬಿಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ನಗರದಲ್ಲಿ ಬೀದಿ ನಾಯಿಗಳ ಹಾವಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಆಗ್ರಹಿಸಿದ್ದಾರೆ. ಬೆಳಿಗ್ಗೆ ವಾಕಿಂಗ್ ಮಾಡುವವರು, ಶಾಲಾ ಮಕ್ಕಳು ಜಾಗೃತಿ ವಹಿಸಬೇಕು ಎಂದು ಅವರು ಹೇಳಿದ್ದಾರೆ.
ಸುಳ್ಯ ನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು ಹುಚ್ಚು ನಾಯಿಗಳು ಇರುವ ಆತಂಕ ಎದುರಾಗಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.
ಸುಳ್ಯ ನಗರ ವಿವಿಧ ಭಾಗಗಳಲ್ಲಿ ಗುಂಪಾಗಿ ತಿರುಗಾಡುವ ಬೀದಿ ನಾಯಿಗಳು ಸಾರ್ವಜನಿರಕನ್ನು, ವಿದ್ಯಾರ್ಥಿಗಳನ್ನು ಅಟ್ಟಾಡಿಸಿಕೊಂಡು ಕಚ್ಚುತಿದೆ. ದ್ವಿಚಕ್ರ ವಾಹನ ಸವಾರರನ್ನೂ ನಾಯಿಗಳು ಅಟ್ಟಾಡಿಸಿಕೊಂಡು ಹೋಗುತಿದೆ. ಅಪಘಾತಕ್ಕೂ ಬೀದಿ ನಾಯಿಗಳು ಕಾರಣವಾಗುತಿದೆ ಎಂದು ಸಾರ್ವಜನಿರಕರು ಹೇಳಿದ್ದಾರೆ.














