*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಕಾಡಾನೆ ಹಾವಳಿಯಿಂದ ನಲುಗಿರುವ ಸುಳ್ಯ ತಾಲೂಕಿನ ಗಡಿ ಗ್ರಾಮಗಳಲ್ಲಿ ಆನೆ ಹಾವಳಿ ತಡೆಯಲು ಜೇನು ಪೆಟ್ಟಿಗೆ ಇರಿಸಿದ ಪ್ರಯೋಗಕ್ಕೆ 6 ತಿಂಗಳು. ನಿರಂತರ ಕಾಡಾನೆ ದಾಳಿಗೆ ತುತ್ತಾಗುತ್ತಿದ್ದ ದೇವರಗುಂಡ ಪ್ರದೇಶದಲ್ಲಿ ಜೇನು ಪೆಟ್ಟಿಗೆ ಇರಿಸಿದ ಬಳಿಕ ಆ ದಾರಿಯಲ್ಲಿ ಕಾಡಾನೆಗಳು ಸುಳಿದಿಲ್ಲ.ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡದಲ್ಲಿ ಆನೆಗಳು ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನು ಇರಿಸಿ ತೋಟಕ್ಕೆ ಆನೆ ಬರದಂತೆ ತಡೆಯುವ ಪ್ರಯೋಗ
ಮಾಡಲಾಗಿದೆ. ಕೃಷಿಕರಾದ ಬಾಲಚಂದ್ರ ಡಿ.ಸಿ ಅವರ ತೋಟಕ್ಕೆ ಆನೆಗಳು ಬರುವ ದಾರಿಯಲ್ಲಿ ಸುಮಾರು 30 ಜೇನು ಪೆಟ್ಟಿಗೆಗಳನ್ನು ಇರಿಸಲಾಗಿತ್ತು. ಕಳೆದ ಜನವರಿಯಲ್ಲಿ ಈ ಯೋಜನೆ ಅನುಷ್ಠಾನ ಮಾಡಲಾಗಿತ್ತು. ಇದೀಗ ಪ್ರಯೋಗ ಮಾಡಿ 6 ತಿಂಗಳು ಪೂರ್ತಿಯಾಗಿದೆ.ಆ ಬಳಿಕ ಒಮ್ಮೆ ಬೇರೆ ದಾರಿಯ ಮೂಲಕ ತೋಟಕ್ಕೆ ಆನೆಗಳು ಬಂದಿತ್ತು. ಹಿಂತಿರುಗಿ ಹೋಗುವಾಗ ಜೇನು ಪೆಟ್ಟಿಗೆ ಇರಿಸಿದ ದಾರಿಯಾಗಿ ಬಂದರೂ ಹತ್ತಿರ ಬಂದು ಸಡನ್ ಬ್ರೇಕ್ ಹಾಕಿದ ಆನೆಗಳು ಆ ದಾರಿಯಾಗಿ ಹೋಗದೆ ಬೇರೆ ದಾರಿಯ ಮೂಲಕ ತೋಟದಿಂದ ಹೊರಗೆ ಹೋಗಿದೆ.ಆ ಬಳಿಕ ಆನೆಗಳು ತೋಟಕ್ಕೆ ಬರಲಿಲ್ಲ ಎನ್ನುತ್ತಾರೆ ಡಿ.ಸಿ.ಬಾಲಚಂದ್ರ.
ಮಳೆಗಾಲದಲ್ಲಿ ಈ ಭಾಗದಲ್ಲಿ ಆನೆ ಹಾವಳಿ ಅಧಿಕ. ಇದೀಗ ಮಳೆಗಾಲ ಆರಂಭಗೊಂಡಿದ್ದು ಆನೆ ಹಾವಳಿ ಯಾವ ರೀತಿ ಮುಂದುವರಿಯಲಿದೆ ಮತ್ತು ಜೇನು ಪೆಟ್ಟಿಗೆ ಪ್ರಯೋಗ ಎಷ್ಟರ ಮಟ್ಟಿಗೆ ಸಹಕಾರಿಯಾಗಲಿದೆ ಎಂಬುದನ್ನು ನೋಡಬೇಕು ಎಂದು ಕೃಷಿಕರು ಹೇಳುತ್ತಾರೆ.
ಏನಿದು ಪ್ರಯೋಗ:
ಕೃಷಿ ತೋಟಗಳಿಗೆ ಆನೆಗಳು ಬರುವುದನ್ನು ತಡೆಯಲು ತೋಟದ ಬದಿಯಲ್ಲಿ ಜೇನು ಪೆಟ್ಟಿಗೆಗಳನ್ನು ಸಾಲಾಗಿ ಇರಿಸಲಾಗಿದೆ. ಸಾಲಾಗಿ ಪೆಟ್ಟಿಗೆಗಳ ಇರಿಸಿ ಅದಕ್ಕೆ ಒಂದನ್ನೊಂದು ಬಂಧಿಸುವಂತೆ, ಹಗ್ಗ, ತಂತಿಗಳನ್ನು ಕಟ್ಟಲಾಗಿದೆ. ಆನೆಗಳು ದಾಂಗುಡಿಯಿಡುವ ಸಂದರ್ಭದಲ್ಲಿ ಜೇನು ಪೆಟ್ಟಿಗೆಗೆ ಅಥವಾ ತಂತಿಗೆ ತಾಗಿದರೆ ಪೆಟ್ಟಿಗೆಗಳು ವೈಬ್ರೇಷನ್ ಆಗಿ ಜೇನು ನೊಣಗಳು ಏಳುತ್ತವೆ. ಜೇನು ನೊಣಗಳು ಗುಯಿಂ ಗುಟ್ಟಿ ಗುಂಪಾಗಿ ಏಳುವ ಕಾರಣ ಆನೆಗಳಿಗೆ ಕಿರಿ ಕಿರಿ ಉಂಟಾಗುತ್ತದೆ. ಇದರಿಂದ ಆನೆಗಳು ಮತ್ತೆ ಆ ಕಡೆ ಬರುವ ಸಾಧ್ಯತೆ ಇಲ್ಲಾ ಎಂದು ಅಂದಾಜಿಸಲಾಗಿದೆ. ದೇವರಗುಂಡದ ಡಿ.ಸಿ.ಬಾಲಚಂದ್ರ ಅವರ ತೋಟದಲ್ಲಿ ಜೇನು ಪೆಟ್ಟಿಗೆಗಳನ್ನು ಇರಿಸುವ ಪ್ರಾಯೋಗಿಕ ಕಾರ್ಯಕ್ಕೆ ಕಳೆದ ಜನವರಿಯಲ್ಲಿ ಚಾಲನೆ ನೀಡಲಾಗಿದೆ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ವತಿಯಿಂದ ಬಾಲಚಂದ್ರ ಡಿ.ಸಿ, ಕೇಶವ, ಡಿ.ಕೆ., ಆಶಿಕ್ ದೇವರಗುಂಡ ಅವರಿಗೆ ನೀಡಲಾದ ತಲಾ 10 ಜೇನು ಪೆಟ್ಟಿಗೆಗಳನ್ನು ಸೇರಿಸಿ 30 ಪೆಟ್ಟಿಗೆಗಳನ್ನು ಸಾಲಾಗಿ ಇರಿಸಲಾಗಿದೆ.ಜೇನು ಪೆಟ್ಟಿಗೆಗಳನ್ನು ನಿರೀಕ್ಷಿಸಲು ಸಿಸಿ ಕ್ಯಾಮರಾ ಅಳವಡಿಸಲಾಗಿದೆ.
ಈ ಜೇನು ಪೆಟ್ಟಿಗೆಯಲ್ಲಿ ಉತ್ತಮ ಜೇನು ಕೂಡ ದೊರೆತಿದೆ. ಮಾರಾಟ ಮಾಡುವಷ್ಟು ಜೇನು ದೊರೆತಿದೆ ಎನ್ನುತ್ತಾರೆ ಕೃಷಿಕರು.
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ವತಿಯಿಂದ
ದ.ಕ.ಉಡುಪಿ ಜೇನು ವ್ಯವಸಾಯಗಾರರ ಸಹಕಾರ ಸಂಘದ ನೇತೃತ್ವದಲ್ಲಿ ಹನಿಮಿಷನ್ ಯೋಜನೆಯಡಿಯಲ್ಲಿ 35 ಮಂದಿ ಕೃಷಿಕರಿಗೆ ಜೇನು ಕೃಷಿ ತರಬೇತಿ ನೀಡಲಾಗಿತ್ತು. ಈ ತರಬೇತಿ ಪಡೆದವರಿಗೆ ಜೇನು ಕೃಷಿ ಮಾಡಲು ತಲಾ 10 ಪೆಟ್ಟಿಗೆಯನ್ನು ಜೇನು ಕುಟುಂಬ ಸಮೇತ ವಿತರಣೆ ಮಾಡಲಾಗಿತ್ತು. ಹೀಗೆ ದೊರೆತ ಜೇನು ಪೆಟ್ಟಿಗೆಗಳನ್ನು ಕಾಡಾನೆ ಹಾವಳಿಯಿಂದ ನಲುಗಿರುವ ದೇವರಗುಂಡ ಭಾಗದಲ್ಲಿ ಅಳವಡಿಸಲಾಗಿದೆ. ಗ್ರಾಮೋದ್ಯೋಗ ಆಯೋಗದ ಹನಿ ಮಿಷನ್ ಯೋಜನೆಯಲ್ಲಿ ನಾಗರಹೊಳೆಯಲ್ಲಿ ಈ ಪ್ರಯೋಗವನ್ನು ಪೊನ್ನಂಪೇಟೆಯ ಫಾರೆಸ್ಟ್ರಿ ಕಾಲೇಜ್ ವತಿಯಿಂದ ಪ್ರಾಜೆಕ್ಟ್ ಮೂಲಕ ಪ್ರಯೋಗ ನಡೆಸಲಾಗಿತ್ತು. ಅಲ್ಲಿ ಕಾಫಿ ತೋಟಕ್ಕೆ ಆನೆಗಳು ಬರುವುದು ಶೇ. 70ರಷ್ಟು ಕಡಿಮೆಯಾಗಿತ್ತು ಎಂದು ಪ್ರಯೋಗದಿಂದ ತಿಳಿದು ಬಂದಿತ್ತು ಎಂದು ಅಧಿಕಾರಿಗಳು ಹೇಳಿದ್ದರು.
ಕಳೆದ ಒಂದು ದಶಕಗಳಿಂದ ಸುಳ್ಯ ತಾಲೂಕಿನ ಹಲವು ಗ್ರಾಮಗಳಲ್ಲಿ ಕಾಡಾನೆ ಹಾವಳಿ ತೀವ್ರವಾಗಿದೆ. ಮಂಡೆಕೋಲು, ಅಜ್ಜಾವರ, ಆಲೆಟ್ಟಿ, ಸಂಪಾಜೆ ಹೀಗೆ ಹಲವು ಗ್ರಾಮಗಳು ಕಾಡಾನೆ ಹಾವಳಿಯಿಂದ ನಲುಗಿ ಹೋಗಿದೆ. ಆನೆ ಹಾವಳಿ ತಡೆಯಲು ಹಲವಾರು ಯೋಜನೆಗಳನ್ನು ಜಾರಿ ಮಾಡಿದರೂ ಯಾವುದೂ ನಿರೀಕ್ಷಿತ ಫಲಿತಾಂಶ ನೀಡಿಲ್ಲ. ಆನೆ ಕಂದಕ,ಸೋಲಾರ್ ಬೇಲಿ ಅಳವಡಿಕೆ, ಆನೆ ಬರುವ ದಾರಿಗೆ ಸಿಮೆಂಟ್ ಸ್ಲಾಬ್ಗಳ ಅಳವಡಿಕೆ ಹೀಗೆ ಅರಣ್ಯ ಇಲಾಖೆ, ಸರಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದರೂ ಇದರಿಂದ ಆನೆ ಹಾವಳಿ ತಡೆಯಲು ಸಾಧ್ಯವಾಗಿಲ್ಲ. ಬಳಿಕ ಜೇನು ಪೆಟ್ಟಿಗೆ ಇರಿಸುವ ಸರಳ ಪ್ರಯೋಗಕ್ಕೆ ನಡೆಸುವ ಯೋಜನೆ ರೂಪಿಸಲಾಗಿದೆ. ಜೇನು ಕೃಷಿ ಆದಾಯದ ಜೊತೆಗೆ
ಆನೆಗಳ ಹಾವಳಿ ತಪ್ಪಿದರೆ ಇದೊಂದು ವರದಾನವಾಗಲಿದೆ ಎಂಬುದು ಕೃಷಿಕರ ನಿರೀಕ್ಷೆ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷ ಮನೋಜ್ ಕುಮಾರ್ ಮಂಡೆಕೋಲಿನ ದೇವರಗುಂಡದಲ್ಲಿ ಚಾಲನೆ ನೀಡಿದ್ದರು.
”ಜೇನು ಪೆಟ್ಟಿಗೆ ಇರಿಸಿದ ಬಳಿಕ ತೋಟಕ್ಕೆ ಆನೆ ಹಾವಳಿ ಕಡಿಮೆಯಾಗಿದೆ. ಬೇರೆ ದಾರಿಯ ಮೂಲಕ ಒಮ್ಮೆ ಬಂದರೂ ಈ ಜೇನು ಪೆಟ್ಟಿಗೆ ಸಮೀಪ ಬಂದು ಹಿಂತಿರುಗಿ ಬೇರೆ ದಾರಿ ಮೂಲಕ ಹೋಗಿದೆ. ಮಳೆಗಾಲದಲ್ಲಿ ಆನೆ ಹಾವಳಿ ಬಗ್ಗೆ ನೋಡಿಕೊಂಡು ಈ ದಾರಿಯ ಮೂಲಕ ಬಾರದೆ, ಬೇರೆ ದಾರಿಯ ಮೂಲಕ ಬಂದರೆ ಅಲ್ಲಿಯೂ ಜೇನು ಪೆಟ್ಟಿಗೆ ಇರಿಸುವ ಬಗ್ಗೆ ಯೋಚನೆ ಮಾಡಿದ್ದೇವೆ.
-ಡಿ.ಸಿ.ಬಾಲಚಂದ್ರ ದೇವರಗುಂಡ
ಕೃಷಿಕರು.